
ಪಿರಿಯಾಪಟ್ಟಣ: ಜಾತಿ ಧರ್ಮದ ಭೇದ ಭಾವವಿಲ್ಲದೆ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಮೂಡಿಸುವ ಉದ್ದೇಶದಿಂದ ಸಾಮೂಹಿಕ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಸಮಾರೋಪ ಕಾರ್ಯಕ್ರಮ ಅಂಗವಾಗಿ ಪಟ್ಟಣದಲ್ಲಿ ಶಾಸಕರು ಹಮ್ಮಿಕೊಂಡಿದ್ದ ಸೀಮಂತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಸಮಾಜಕ್ಕೆ ಉತ್ತಮ ಮಕ್ಕಳನ್ನು ನೀಡುವಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ, ಬೇರೆಯವರ ಬಗ್ಗೆ ಕೀಳು ಮಾತನಾಡುವ ಹವ್ಯಾಸ ಬೆಳೆಸಿಕೊಳ್ಳದೆ ತಾವು ಮಾಡಿದ ಸೇವೆ ಇತರರಿಗೆ ಮಾದರಿಯಾಗುವ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಬೆಳೆಸಿ ಸಮಾಜಕ್ಕೆ ಮಾದರಿ ಮಾಡುವಂತೆ ತಿಳಿಸಿ ಕೇಂದ್ರ ಸರ್ಕಾರದ ಪೋಷಣ್ ಮಾಸಾಚರಣೆ ಅಭಿಯಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಮಾತನಾಡಿ ಗರ್ಭಿಣಿ ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಪೋಷಕಾಂಶಯುಕ್ತ ಆಹಾರ ಸೇವನೆ ಮಾಡಿ ಅಪೌಷ್ಟಿಕತೆಯಿಂದ ದೂರವಿರುವಂತೆ ಕೋರಿದರು.
ಸಿಡಿಪಿಒ ಮಮತಾ ಅವರು ಮಾತನಾಡಿ ಸೆಪ್ಟೆಂಬರ್ ತಿಂಗಳ ಮೊದಲ ದಿನದಿಂದ ಅಂತ್ಯದವರೆಗೆ ತಾಲ್ಲೂಕಿನ ಎಲ್ಲ ಅಂಗನವಾಡಿ ಕೇಂದ್ರ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಾಲೆಗಳಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಆಚರಿಸಿ ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಗರ್ಭಿಣಿ ಬಾಣಂತಿ ಹಾಗೂ ಕಿಶೋರಿಯರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಸೀಮಂತ ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ 500 ಮಂದಿ ಚೊಚ್ಚಲ ಗರ್ಭಿಣಿಯರಿಗೆ ಶಾಸಕ ಕೆ.ಮಹದೇವ್ ಹಾಗೂ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರ ವತಿಯಿಂದ ಇಳಕಲ್ ಸೀರೆ ನೀಡಿ ಸಾಂಪ್ರದಾಯಿಕವಾಗಿ ಹಣ್ಣು ಹಂಪಲ ಬಳೆ ಅರಿಶಿಣ ಕುಂಕುಮ ಸೇರಿದಂತೆ ಸೋಗಿಲು ನೀಡಿ ಸತ್ಕರಿಸಲಾಯಿತು, ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಹೋಳಿಗೆ ಊಟ ಏರ್ಪಡಿಸಲಾಗಿತ್ತು.
ಈ ಸಂದರ್ಭ ಶಾಸಕ ಕೆ.ಮಹದೇವ್ ಅವರ ಪತ್ನಿ ಸುಭದ್ರಮ್ಮ ಹಾಗೂ ಸೊಸೆಯಂದಿರು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ, ನಿರ್ದೇಶಕಿ ಸುನಿತಾ ಮಂಜುನಾಥ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ತಾ.ಪಂ ಮಾಜಿ ಸದಸ್ಯರಾದ ಎಸ್.ರಾಮು, ಮಲ್ಲಿಕಾರ್ಜುನ್, ಎ.ಟಿ ರಂಗಸ್ವಾಮಿ, ಜೆಡಿಎಸ್ ಮಹಿಳಾ ಘಟಕ ಅಧ್ಯಕ್ಷೆ ಪ್ರೀತಿ ಅರಸ್, ಟಿಹೆಚ್ಓ ಡಾ.ಶರತ್ ಬಾಬು, ಎಡಿಎಲ್ ಆರ್ ಚಿಕ್ಕಣ್ಣ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಪುಷ್ಪಲತಾ, ರೋಟರಿ ಐಕಾನ್ ಅಧ್ಯಕ್ಷ ಕೆ.ರಮೇಶ್, ಮುಖಂಡರಾದ ಪಟೇಲ್ ನಟೇಶ್, ಚಂದ್ರಶೇಖರಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ, ಎಸಿಡಿಪಿಒ ಅಶೋಕ್, ಮೇಲ್ವಿಚಾರಕರಾದ ಸವಿತಾ, ಶ್ವೇತಾ, ಧನ್ಯರತಿ, ಸುನಿತಾ, ರೇಖಾ ಹಾಗೂ ಕಚೇರಿ ಸಿಬ್ಬಂದಿ ಮತ್ತು ತಾಲ್ಲೂಕಿನ ವಿವಿಧೆಡೆಯ ಅಂಗನವಾಡಿ ಕಾರ್ಯಕರ್ತರು ಇದ್ದರು.