ಪಿರಿಯಾಪಟ್ಟಣ: ಪಟ್ಟಣದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಅನುದಾನ ನೀಡಿ ಸಹಕರಿಸುತ್ತಿದ್ದೆನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ದೊಡ್ಡ ನಾಯಕರ ಬೀದಿಯಲ್ಲಿ ರಾಮಮಂದಿರ ಭವನ ನಿರ್ಮಾಣಕ್ಕೆ 40 ಲಕ್ಷ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಪರಾಭವಗೊಂಡರೂ ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿ ನನಗೆ ರಾಜಕೀಯವಾಗಿ ಶಕ್ತಿ ನೀಡಿದ್ದೀರಿ ನಾನು ಪಟ್ಟಣದಲ್ಲೇ ವಾಸಿಸುತ್ತಿರುವುದರಿಂದ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿದ್ದು ಎಲ್ಲಾ ಜನಾಂಗಗಳ ಅಭಿವೃದ್ಧಿಗೆ ಸಮನಾಗಿ ಅನುದಾನ ನೀಡುತ್ತಿದ್ದೇನೆ, ಪಟ್ಟಣ ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭ ಕಾವೇರಿ ಕುಡಿಯುವ ನೀರು ಸರಬರಾಜು ಯೋಜನೆ, ರಸ್ತೆ ಚರಂಡಿ ನಿರ್ಮಾಣ ಮತ್ತು ನಿರ್ಗತಿಕರಿಗೆ ನಿವೇಶನ ವಸತಿ ಸೌಲಭ್ಯ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಅಂದಿನ ದಿನಗಳಲ್ಲೆ ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡಿದ್ದೇ ಈ ಯೋಜನೆಗಳನ್ನು ನಂತರ ಬಂದ ಆಡಳಿತ ಮಂಡಳಿ ನಿರ್ಲಕ್ಷಿಸಿದ ಕಾರಣ ಯೋಜನೆಗಳು ಯಶಸ್ವಿಯಾಗದೆ ಕುಂಠಿತವಾದವು, ಶಾಸಕನಾಗಿ ಆಯ್ಕೆಯಾದ ನಂತರ ಪಟ್ಟಣ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ, 150 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಕೇವಲ ವಾಲ್ಮೀಕಿ ಸಮುದಾಯಕ್ಕೆ ಮಾತ್ರವಲ್ಲದೆ ಒಕ್ಕಲಿಗ ರಾಮಮಂದಿರಕ್ಕೆ 40 ಲಕ್ಷ ರೂ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ 20 ಲಕ್ಷ ರೂಗಳ ಅನುದಾನ ನೀಡುತ್ತಿದ್ದೇನೆ ಇದನ್ನು ಪಟ್ಟಣದ ಜನತೆ ಅರಿತುಕೊಳ್ಳಬೇಕು ಮೂರು ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ಪಟ್ಟಣದ ಜನತೆ ಅಲ್ಪಪ್ರಮಾಣದ ಮತವನ್ನು ನೀಡಿದ್ದರು ಆದರೂ ಕೂಡ ನಾನು ಇವರಿಗೆ ಮೋಸ ಮಾಡದೆ ಪ್ರತಿ ವಾರ್ಡ್ ಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿಯೂ ನನ್ನ ಗೆಲುವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ತಾಲುಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳು ಹಿಂದೆಂದೂ ಆಗಿಲ್ಲ ನಾನು ಹಲವಾರು ಶಾಸಕರನ್ನು ಕಂಡಿದ್ದೇನೆ ಆದರೆ ಕೆ.ಮಹದೇವ್ ರವರು ಶಾಸಕರಾದ ಮೇಲೆ ತಮ್ಮ ಶಕ್ತಿ ಮೀರಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ 250 ಕೋಟಿ ರೂ ವೆಚ್ಚದಲ್ಲಿ ತಾಲೂಕಿನ ಹಲವು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಪೂರ್ಣಗೋಳಿಸಿದ್ದಾರೆ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಶಾಲಾ ಕಾಲೇಜುಗಳನ್ನು ಅಭಿವೃದ್ಧಿಪಡಿಸಿದ್ದು ತಾಲ್ಲೂಕಿನ ಜನತೆ ಇದನ್ನು ಮನಗಂಡು ಮುಂದೆಯೂ ಬೆಂಬಲಿಸುವಂತೆ ಕೋರಿದರು.
ಈ ಸಂದರ್ಭ ಪುರಸಭೆ ಅಧ್ಯಕ್ಷ ಕೆ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಸದಸ್ಯರಾದ ಚಾಮರಾಜು, ಭಾರತಿ, ಮಂಜುನಾಥ್ ಸಿಂಗ್, ಮಾಜಿ ಸದಸ್ಯರಾದ ಸಣ್ಣಪ್ಪ ನಾಯಕ, ತಿಮ್ಮ ನಾಯಕ, ಮುಖಂಡರಾದ, ಚಂದ್ರ, ಗಣೇಶ್, ಚಿಕ್ಕಣ್ಣ, ಸ್ವಾಮಿ, ಸುರೇಶ್, ಮೆಲ್ಲಹಳ್ಳಿ ರವಿ, ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಮತ್ತಿತರಿದ್ದರು.