
ಪಿರಿಯಾಪಟ್ಟಣ: ಚುನಾವಣೆ ಸಂದರ್ಭ ಮತದಾರರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಿ ತಾಲ್ಲೂಕಿನ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ 35 ಲಕ್ಷ ವೆಚ್ಚದ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಕಾಲೊನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಸಾರ್ವಜನಿಕರು ನನಗೆ ನೀಡುವ ಬೇಡಿಕೆಗಳ ಮನವಿಗಳನ್ನು ಒಂದೇ ಬಾರಿಗೆ ಈಡೇರಿಸಲಾಗದಿದ್ದರು ಹಂತಹಂತವಾಗಿ ಆದ್ಯತೆಗನುಗುಣವಾಗಿ ಬಗೆಹರಿಸಿ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲು ಗಮನಹರಿಸಿದ್ದೇನೆ, ಅಧಿಕಾರಿಗಳು ಸಹ ಸಾರ್ವಜನಿಕರಿಂದ ಬರುವ ದೂರುಗಳನ್ನು ನಿರ್ಲಕ್ಷಿಸದೆ ತ್ವರಿತಗತಿಯಲ್ಲಿ ಬಗೆಹರಿಸಿ ಅಭಿವೃದ್ಧಿಗೆ ಒತ್ತು ನೀಡಬೇಕು, ಗ್ರಾಮಾಂತರ ಪ್ರದೇಶಗಳಲ್ಲಿನ ರಸ್ತೆ ಚರಂಡಿ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗಾಗಿ ಮುಂದಿನ ಚುನಾವಣೆಯಲ್ಲಿಯೂ ಬೆಂಬಲಿಸುವಂತೆ ಕೋರಿದರು.
ವಿದ್ಯುತ್ ಸರಬರಾಜಿನಲ್ಲಿ ಕೊರತೆ ಉಂಟಾಗುತ್ತಿದ್ದು ಸಮಸ್ಯೆ ಬಗೆಹರಿಸುವಂತೆ ಶಾಸಕರಿಗೆ ಸ್ಥಳೀಯರು ದೂರಿದಾಗ ಸೆಸ್ಕ್ ಮೇಲಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಾರ್ವಜನಿಕರ ಬೇಡಿಕೆ ಪೂರೈಸುವಂತೆ ಸೂಚಿಸಿದರು.
ಈ ವೇಳೆ ಹಿಟ್ನೆಹೆಬ್ಬಾಗಿಲು ಗ್ರಾಮದ ಪರಿಶಿಷ್ಟ ಪಂಗಡ ಕಾಲೊನಿಯಲ್ಲಿ 20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಜಿ.ಪಂ ಎಇಇ ಮಲ್ಲಿಕಾರ್ಜುನ್, ಕಂಪಲಾಪುರ ಗ್ರಾ.ಪಂ ಅಧ್ಯಕ್ಷೆ ಮಮತಾ ಹಾಗೂ ಸದಸ್ಯರು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಜಿಲ್ಲಾ ಬ್ಯಾಂಕ್ ನಿರ್ದೇಶಕ ಹರೀಶ್, ಟಿಎಪಿಸಿಎಂಎಸ್ ನಿರ್ದೇಶಕಿ ಸುನಿತಾ ಮಂಜುನಾಥ್, ಮುಖಂಡರಾದ ಗಗನ್, ಕುಮಾರ್, ವಿನೋದ್ ಕುಮಾರ್, ಲಕ್ಷ್ಮಣ್, ಹಾಗು ಸ್ಥಳೀಯ ಜನಪ್ರತಿನಿಧಿಗಳು, ಜೆಡಿಎಸ್ ಪಕ್ಷದ ಮುಖಂಡರು ಗ್ರಾಮಸ್ಥರು ಇದ್ದರು.
