ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಶಾಸಕ ಕೆ.ಮಹದೇವ್ ಭೇಟಿ ನೀಡಿ ಸಭೆ ನಡೆಸಿ ಮಾತನಾಡಿದರು

ಪಿರಿಯಾಪಟ್ಟಣ: ತಂಬಾಕು ರೈತರಿಂದ ಮಂಡಳಿಗೆ ಕೋಟ್ಯಂತರ ರೂ ಲಾಭವಿದ್ದರೂ ರೈತರ ಹಿತ ಕಾಪಾಡುವಲ್ಲಿ ಮಂಡಳಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ ಶಾಸಕ ಕೆ.ಮಹದೇವ್ ಅವರು ರೈತರೊಟ್ಟಿಗೆ    ಮಂಡಳಿ ವಿರುದ್ಧ ಪ್ರತಿಭಟನೆ ಎಚ್ಚರಿಕೆ ನೀಡಿದರು.

ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ಹರಾಜು ಪ್ರಕ್ರಿಯೆ ವೀಕ್ಷಿಸಿದ ಬಳಿಕ ಮಂಡಳಿ ಅಧಿಕಾರಿಗಳು ಹಾಗೂ ಖರೀದಿ ಕಂಪನಿ ಮುಖ್ಯಸ್ಥರು ಮತ್ತು ತಂಬಾಕು ರೈತರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು, ಭಾರಿ ಮಳೆಯಿಂದಾಗಿ ಈ ಬಾರಿ ತಾಲ್ಲೂಕಿನಲ್ಲಿ ತಂಬಾಕು ಇಳುವರಿ ಕುಂಠಿತವಾಗಿದ್ದು ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ, ಮಾರಾಟ ಸಂದರ್ಭ ಬೆಳೆ ಬೆಳೆಯುವ ಖರ್ಚಿಗಿಂತ ಕಡಿಮೆ ಬೆಲೆ ದೊರೆಯುತ್ತಿರುವುದರಿಂದ ಹಲವು ರೈತರು ಸಾಲಬಾಧೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಜರುಗಿದರೂ ಸಹ ತಂಬಾಕು ಮಂಡಳಿ ಅಧಿಕಾರಿಗಳು ಹಾಗೂ ಖರೀದಿದಾರ ಕಂಪೆನಿಗಳು ಉತ್ತಮ ಗುಣಮಟ್ಟದ ತಂಬಾಕಿಗೆ ಹೆಚ್ಚು ಬೆಲೆ ನೀಡದೆ ರೈತರನ್ನು ನಿರ್ಲಕ್ಷಿಸುತ್ತಿವೆ, ಗುಣಮಟ್ಟದ ತಂಬಾಕಿಗೆ ಪ್ರತಿ ಕೆಜಿಗೆ ಸರಾಸರಿ 300 ರೂ ನೀಡುವ ಮೂಲಕ ರೈತರ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು, ಮಂಡಳಿ ಅಧಿಕಾರಿಗಳ ನೇತೃತ್ವ ಖರೀದಿದಾರ ಕಂಪೆನಿಗಳ ಸಭೆ ನಡೆಸಿ ದರದಲ್ಲಿ ವ್ಯತ್ಯಾಸವಾಗದಂತೆ ನಿಗಾವಹಿಸಬೇಕು, ರೈತರಿಂದ ಹೆಚ್ಚು ತಂಬಾಕು ಕೊಳ್ಳುವ ಐಟಿಸಿ ಕಂಪೆನಿಯವರು ತಮ್ಮ ವ್ಯಾಪಾರದ ಜತೆಗೆ ರೈತರಿಗೂ ಸಹ ಉತ್ತಮ ಬೆಲೆ ನೀಡಿ ಹಿತ ಕಾಯಬೇಕು ಇಲ್ಲವಾದಲ್ಲಿ ರೈತರೊಟ್ಟಿಗೆ ಮಂಡಳಿ ಹಾಗೂ ಖರೀದಿದಾರ ಕಂಪೆನಿಗಳ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ, ಮಂಡಳಿ ನಿರ್ದೇಶಕಿ ಅಶ್ವಿನಿ ನಾಯ್ಡು ಅವರು ಮಾರುಕಟ್ಟೆ ಪ್ರಾರಂಭ ಸಂದರ್ಭ ರೈತರು ಹಾಗೂ ಖರೀದಿದಾರ ಕಂಪೆನಿಗಳು ಮತ್ತು ಮಂಡಳಿ ಅಧಿಕಾರಿಗಳ ಸಭೆ ನಡೆಸದೆ ನಿರ್ಲಕ್ಷ್ಯ ವಹಿಸಿ ಸ್ಥಳೀಯ ಜನಪ್ರತಿನಿಧಿಗಳಿಗೂ ಮಾಹಿತಿ ನೀಡದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.  

ಈ ಸಂದರ್ಭ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಎಂ.ಲಕ್ಷ್ಮಣ್ ರಾವ್, ಐಟಿಸಿ ಕಂಪನಿ ಅಧಿಕಾರಿ ಪೂರ್ಣೇಶ್, ತಂಬಾಕು ಹರಾಜು ಅಧೀಕ್ಷಕರಾದ ಪ್ರಭಾಕರನ್, ಶಂಭುಲಿಂಗೇಗೌಡ, ರಾಮ್ ಮೋಹನ್ ಸೂರಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್. ರವಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಸದಸ್ಯ ಪ್ರಕಾಶ್ ಸಿಂಗ್, ರೈತ ಮುಖಂಡ ಪ್ರಕಾಶ್ ರಾಜೇಅರಸ್, ಮಹೇಶ್, ಗೋವಿಂದೇಗೌಡ, ಅಶೋಕ್, ರಘುನಾಥ್, ಗಿರೀಶ್ ಮತ್ತಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top