ಪಿರಿಯಾಪಟ್ಟಣ: ಪಟ್ಟಣದಲ್ಲಿ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮ ಕಲಾತಂಡ ಸ್ತಬ್ಧಚಿತ್ರ ಹಾಗು ನಗಾರಿ ಸದ್ದಿನ ಕಲರವದೊಂದಿಗೆ ಸಂಭ್ರಮ ಸಡಗರದಿಂದ ನಡೆಯಿತು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಮಿತಿ ಮತ್ತು ತಾಲ್ಲೂಕು ಗ್ರಾಮೀಣ ದಸರಾ ಆಚರಣೆ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪಟ್ಟಣದ ಕನ್ನಂಬಾಡಿಯಮ್ಮ ದೇವಾಲಯದಲ್ಲಿ ನಾಡಿನ ಜನತೆ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಕೆ.ಮಹದೇವ್ ಅವರು ಬಳಿಕ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು, 

ಮೆರವಣಿಗೆಗೆ ಕಲಾತಂಡಗಳ ರಂಗು: ವಿಶೇಷವಾಗಿ ನಡೆದ ಮೆರವಣಿಗೆಯಲ್ಲಿ ಮೈಸೂರು ಹಾಗೂ ಚಿತ್ರದುರ್ಗ ಸಂಸ್ಥಾನ ಮತ್ತು ವೀರವನಿತೆಯರ ಸ್ತಬ್ಧ ಚಿತ್ರದೊಂದಿಗೆ ಡೊಳ್ಳು, ನಂದಿಧ್ವಜ, ಕಂಸಾಳೆ, ಗೊರವ, ಡಮರುಗ, ಕೀಲುಬೊಂಬೆ, ಪೂಜಾ ಕುಣಿತ, ವೀರಗಾಸೆ, ಹುಲಿವೇಷ, ಶಿವತಾಂಡವ ನೃತ್ಯಗಳ ಕಲರವ ಜತೆಗೆ ಟಿಬೆಟಿಯನ್, ಕೊಡಗು ಗೌಡ, ಆಶಾ ಕಾರ್ಯಕರ್ತೆಯರು ಹಾಗು ಆದಿವಾಸಿ ಜನಾಂಗದವರು ನೃತ್ಯ ಮಾಡುತ್ತ ಪೂರ್ಣಕುಂಭ ಮೆರವಣಿಗೆಯಲ್ಲಿ ಪಟ್ಟಣದ ಬಿ.ಎಂ.ರಸ್ತೆ, ಎಸ್‌.ಜೆ ರಸ್ತೆ, ಚನ್ನಪಟ್ಟಣ ಬೀದಿ, ಗೊಲ್ಲರ ಬೀದಿ, ನುಗ್ಗೇಹಳ್ಳಿ ರಸ್ತೆ, ದೊಡ್ಡ ಬೀದಿ, ನೆಹರು ರಸ್ತೆ, ಬೆಟ್ಟದಪುರ ವೃತ್ತ, ಸಂತೆಪೇಟೆ ಮೂಲಕ ಸಾಗಿ ಗೋಣಿಕೊಪ್ಪ ರಸ್ತೆಯ ಸರ್ಕಾರಿ  ಜೂನಿಯರ್ ಕಾಲೇಜು ಮೈದಾನದ ಬಳಿಯ ವೇದಿಕೆ ಕಾರ್ಯಕ್ರಮ ಸ್ಥಳಕ್ಕೆ ತಲುಪಿದರು, ಮೆರವಣಿಗೆಗೆ ಚಾಲನೆ ನೀಡಿದ ಸ್ಥಳದಿಂದ ವೇದಿಕೆ ಕಾರ್ಯಕ್ರಮ ಸ್ಥಳದವರೆಗೆ ಶಾಸಕ ಕೆ.ಮಹದೇವ್ ಅವರು ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು,    ಮೆರವಣಿಗೆಯುದ್ದಕ್ಕೂ ಸರ್ಕಾರಿ ಅಧಿಕಾರಿಗಳು ಡೊಳ್ಳು ಸದ್ದಿಗೆ ನೃತ್ಯ ಮಾಡಿ ರಂಜಿಸಿದರು, ಪುರುಷ ಅಧಿಕಾರಿಗಳು ಸಾಂಪ್ರದಾಯಿಕ ಬಿಳಿ ಪಂಚೆ ಶಲ್ಯ ಶರ್ಟ್ ತೊಟ್ಟರೆ ಮಹಿಳೆಯರು ರೇಷ್ಮೆ ಸೇರಿದಂತೆ ವಿವಿಧ ಬಗೆಯ ಸೀರೆ ತೊಟ್ಟು ಸಂಭ್ರಮಿಸಿದರು, ವೇದಿಕೆ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಭ್ರೂಣ ಹತ್ಯೆ ಕುರಿತಂತೆ ಕಿರು ನಾಟಕ ಮಾಡಿ ಅರಿವು ಮೂಡಿಸಲಾಯಿತು, 

ವೇದಿಕೆ ಕಾರ್ಯಕ್ರಮ: ಜೂನಿಯರ್ ಕಾಲೇಜು ಬಳಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಶಾಸಕ

ಕೆ.ಮಹದೇವ್ ಅವರು ಮಾತನಾಡಿ ದಸರಾ ವೈಭವವನ್ನು ಗ್ರಾಮೀಣ ಪ್ರದೇಶಗಳಿಗೂ ಪರಿಚಯಿಸುವ ಉದ್ದೇಶದಿಂದ ಸರ್ಕಾರದ ಸಹಯೋಗದೊಂದಿಗೆ ತಾಲ್ಲೂಕು ಮಟ್ಟದಲ್ಲಿ ಗ್ರಾಮೀಣ ದಸರಾ ಆಚರಿಸಲಾಗುತ್ತಿದೆ,

ಅರಸರ ಆಳ್ವಿಕೆಯ ಸಂದರ್ಭದಲ್ಲಿ ಆಚರಿಸಿಕೊಂಡು ಬರಲಾಗುತ್ತಿದ್ದ ದಸರಾ ಮಹೋತ್ಸವವನ್ನು ಈಚಿನ ದಿನಗಳಲ್ಲಿ ಮತ್ತಷ್ಟು ವೈಭವ ವೈಶಿಷ್ಟತೆಗಳೊಂದಿಗೆ ಆಚರಿಸಲಾಗುತ್ತಿದೆ, ಮೈಸೂರು ನಗರಕ್ಕೆ ಸೀಮಿತವಾಗಿದ್ದ ದಸರ ಆಚರಣೆಯನ್ನು ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಿಬೇಕು ಎಂಬ ಜನಪ್ರತಿನಿಧಿಗಳ ಕೋರಿಕೆ ಮೇರೆಗೆ ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲಿಯೂ ಗ್ರಾಮೀಣ ದಸರಾ ಆಚರಣೆಗೆ ಮುಂದಾಗಿರುವುದು ಸ್ವಾಗತಾರ್ಹ, ಈ ವರ್ಷ ಗ್ರಾಮೀಣ ದಸರಾ ಆಚರಣೆಗೆ ಪ್ರತಿ ತಾಲ್ಲೂಕು ಕೇಂದ್ರಕ್ಕೆ ಸರ್ಕಾರ 3 ಲಕ್ಷ ರೂ ಮಾತ್ರ ನೀಡಿದೆ, ಮುಂದಿನ ದಿನಗಳಲ್ಲಿ ಈ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದಲ್ಲಿ ಇನ್ನೂ ವಿಜ್ರಂಭಣೆಯಿಂದ ಆಚರಿಸಬಹುದಾಗಿದೆ ಎಂದರು. 

ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಮಾತನಾಡಿ ನವರಾತ್ರಿಯ ಶುಭ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವೈಭವದ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.

ಸಚಿವರ ಗೈರು: ಕಲಾತಂಡಗಳ ಮೆರವಣಿಗೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರು ಉದ್ಘಾಟಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾದರು ಸಹ ಸಚಿವರು ಆಗಮಿಸದ ಹಿನ್ನೆಲೆ ಶಾಸಕರು ಮೆರವಣಿಗೆಗೆ ಚಾಲನೆ ನೀಡಿದರು.

ಬಹುಮಾನ ವಿತರಣೆ ಹಾಗೂ ಸನ್ಮಾನ: ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸಮಿತಿ ವತಿಯಿಂದ ಬಹುಮಾನ ವಿತರಣೆ ಹಾಗು ತಾಲ್ಲೂಕಿನ ವಿವಿಧ ಕ್ಷೇತ್ರಗಳ ಪ್ರಗತಿಪರ ಕೃಷಿಕರಿಗೆ ಸನ್ಮಾನ, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾ ತಂಡಗಳಿಗೆ ಪ್ರೋತ್ಸಾಹ ಧನವನ್ನು ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್ ವಿತರಿಸಿದರು.

ಈ ಸಂದರ್ಭ ಪುರಸಭೆ ಉಪಾಧ್ಯಕ್ಷೆ ಪಿ.ಕೆ ಆಶಾ,  ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ ಹಾಗು ಸದಸ್ಯರು, ಮುಖ್ಯಾಧಿಕಾರಿ ಮಹೇಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಮೋಹನ್ ಕುಮಾರ್, ಸಿಡಿಪಿಒ ಮಮತಾ, ಎಡಿಎಲ್ ಆರ್ ಚಿಕ್ಕಣ್ಣ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ಸರ್ವೆ ಅಧಿಕಾರಿ ಎಂ.ಕೆ ಪ್ರಕಾಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಬಿಸಿಎಂ ವಿಸ್ತರಣಾಧಿಕಾರಿ ಪ್ರೇಮ್ ಕುಮಾರ್, ಜಿಪಂ ಎಇಇ ಜಯಂತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top