ಶಾಸಕ ಕೆ.ಮಹದೇವ್ ಅವರು ಯುವ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ವೀಕ್ಷಿಸಿದರು

ಪಿರಿಯಾಪಟ್ಟಣ: ಗ್ರಾಮೀಣ ದಸರಾ ಅಂಗವಾಗಿ ಪಟ್ಟಣದಲ್ಲಿ ಚೊಚ್ಚಲ ಬಾರಿಗೆ ಆಯೋಜಿಸಿದ್ದ ಯುವ ಉತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹ ಹಾಡು ಹಾಡುವ ಮೂಲಕ ರಂಜಿಸಿದರು.

ಇದೇ ಮೊದಲ ಬಾರಿಗೆ ತಾಲ್ಲೂಕು ಆಡಳಿತ ಹಾಗೂ ಗ್ರಾಮೀಣ ದಸರಾ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಗೋಣಿಕೊಪ್ಪ ರಸ್ತೆಯ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಗ್ರಾಮೀಣ ದಸರಾ ವೇದಿಕೆ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಸಂಜೆ ಏಳು ಗಂಟೆಯ ನಂತರ ಬೆಂಗಳೂರಿನ ಉದಾನ್ ಬ್ಯಾಂಡ್ ತಂಡದವರಿಂದ ಆರ್ಕೆಸ್ಟ್ರಾ ಹಾಗೂ ಸ್ಥಳಿಯ ನೃತ್ಯಶಾಲೆಗಳ ವತಿಯಿಂದ ತಾಲ್ಲೂಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ನೃತ್ಯ ಕಾರ್ಯಕ್ರಮಕ್ಕೆ ಕಲಾ ಆರಾಧಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಪ್ರತಿ ನೃತ್ಯ ಹಾಗೂ ಹಾಡಿನ ಸಮಯ ಚಪ್ಪಾಳೆ ಹಾಗೂ ಶಿಳ್ಳೆ ಜೋರು ಸದ್ದಿನ ನಡುವೆ ಪ್ರೇಕ್ಷಕರು ಸಹ ನೃತ್ಯ ಮಾಡಿ ರಂಜಿಸಿದರು.

ಉದಾನ್ ಬ್ಯಾಂಡ್ ತಂಡದ ಸಿನಿಮಾ ಗಾಯಕರಾದ ಶ್ರೀನಿವಾಸ್ ಹಾಗೂ ಸಂಗೀತ ರಾಮಕೃಷ್ಣ ಸೇರಿದಂತೆ ಹಲವರು ಕನ್ನಡದ ಹೊಸ ಹಾಗೂ ಹಳೆಯ ಚಿತ್ರಗೀತೆಗಳನ್ನು ಹಾಡುವುದರ ಜೆತೆಗೆ ನೃತ್ಯಪಟುಗಳು ಹಲವು ಗೀತೆಗಳಿಗೆ ನೃತ್ಯ ಮಾಡಿ ರಂಜಿಸಿದರು, ಮೈಸೂರಿನ ಯುವ ದಸರಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಪಟ್ಟಣದ ಗ್ರೀನ್ ಕಿಡ್ಸ್ ಹಾಗೂ ನಕ್ಷತ್ರ ಡ್ಯಾನ್ಸ್ ಸ್ಕೂಲ್ ವತಿಯಿಂದ ತಾಲ್ಲೂಕಿನ ವಿವಿಧೆಡೆಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ಸಾರುವ ಚಿತ್ರಗೀತೆಗಳಿಗೆ ನೃತ್ಯ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.

ಕಾರ್ಯಕ್ರಮ ವೇಳೆ ಪುನೀತ್ ರಾಜ್ ಕುಮಾರ್ ಅವರ ಹಾಡು ಹಾಗೂ ನೃತ್ಯ ಪ್ರದರ್ಶನ ವೇಳೆ ಪ್ರೇಕ್ಷಕರು ಪುನೀತ್ ಪರ ಜೈಕಾರ ಕೂಗಿ ಭಾವುಕರಾದರು, ಸ್ಥಳೀಯ ಚಿತ್ರ ಕಲಾವಿದ ಪವನ್ ಅವರು ವೇದಿಕೆ ಸ್ಥಳದಲ್ಲಿಯೇ ಪುನೀತ್ ಅವರ ಭಾವಚಿತ್ರ ರಚಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು, ಪವನ್ ಅವರು ರಚಿಸಿದ  ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರ ಭಾವಚಿತ್ರವನ್ನು ವೇದಿಕೆಯಲ್ಲಿ ಪ್ರಸನ್ನ ಅವರಿಗೆ ಉಡುಗೊರೆಯಾಗಿ ನೀಡಲಾಯಿತು.

ಟಿಎಚ್ಒ ಡಾ.ಶರತ್ ಬಾಬು ಅವರು ಯಾರೇ ನೀನು ರೋಜಾ ಹೂವೇ, ಇಒ ಸಿ.ಆರ್ ಕೃಷ್ಣಕುಮಾರ್ ಅವರು ನಾ ನಿನ್ನ ಮರೆಯಲಾರೆ, ಎಡಿಎಲ್ ಆರ್ ಚಿಕ್ಕಣ್ಣ ಅವರು ನಮ್ಮೂರ ಮಂದಾರ ಹೂವೆ, ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರು ಕನ್ನಡ ನಾಡಿನ ಜೀವನದಿ ಹಾಡು ಹಾಡುವ ಮೂಲಕ ರಂಜಿಸಿದರು, ಶಾಸಕ ಕೆ.ಮಹದೇವ್ ಅವರು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು, ಸ್ಥಳಿಯ ನೃತ್ಯ  ಪಟುಗಳ ಒತ್ತಾಯದ ಮೇರೆಗೆ ಹಾಡಿಗೆ ನೃತ್ಯ ಮಾಡಿ ರಂಜಿಸಿದ್ದು ವಿಶೇಷವಾಗಿತ್ತು.

ಒಟ್ಟಾರೆ ಪಿರಿಯಾಪಟ್ಟಣದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಯುವ ಉತ್ಸವ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಮುಂದಿನ ದಿನಗಳಲ್ಲಿ ಮೈಸೂರು ಯುವ ದಸರಾ ಸಂಭ್ರಮದಂತೆ ಮತ್ತಷ್ಟು ಹೆಚ್ಚಿನ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

Leave a Comment

Your email address will not be published. Required fields are marked *

error: Content is protected !!
Scroll to Top