
ಪಿರಿಯಾಪಟ್ಟಣ: ತಾಲೂಕಿನಲ್ಲಿ ಉತ್ತಮ ಶಿಕ್ಷಣ ದೊರಕುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಗೆ ಒತ್ತು ನೀಡಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲೂಕಿನ ಹಬಟೂರ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಯಲ್ಲಿ ಉತ್ತಮ ಮೂಲಭೂತ ಸೌಕರ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಶಿಥಿಲಗೊಂಡಿದ್ದ ಹಳೇ ಕಟ್ಟಡಗಳನ್ನು ನೆಲಸಮಗೊಳಿಸಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ಈಗಾಗಲೇ ತಾಲ್ಲೂಕಿನಾದ್ಯಂತ ಹಲವು ಶಾಲೆಗಳಲ್ಲಿ ನೂತನ ಕೊಠಡಿ ಉದ್ಘಾಟನೆ ಮಾಡಲಾಗಿದೆ, ಶಾಸಕನಾದ ನಂತರ ವಿಪಕ್ಷ ಸ್ಥಾನದಲ್ಲಿದ್ದರು ತಾಲ್ಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಕಾಡಿಬೇಡಿ ಹೆಚ್ಚು ಅನುದಾನ ತಂದು ಹಲವು ನೂತನ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ ಇದನ್ನು ತಾಲ್ಲೂಕಿನ ಜನತೆ ಮನಗಂಡು ಮುಂಬರುವ ದಿನಗಳಲ್ಲಿಯೂ ಮತ್ತೆ ಚಲಾಯಿಸುವಂತೆ ಕೋರಿದರು.
ಈ ವೇಳೆ ಹಿಟ್ನೆಹೆಬ್ಬಾಗಿಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದಾಜು 8.8 ಲಕ್ಷ ವೆಚ್ಚದ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಚೌತಿ ಗ್ರಾ.ಪಂ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ಲಕ್ಷ್ಮಣ್ ಪಟೇಲ್, ಮಾಜಿ ಉಪಾಧ್ಯಕ್ಷ ರವಿಚಂದ್ರ ಬೂದಿತಿಟ್ಟು, ಸದಸ್ಯರಾದ ರಘು, ಶ್ರುತಿ, ರಾಜೇಶ್ವರಿ, ರಾಮೇಗೌಡ, ಪಿಡಿಒ ಮೋಹನ್ ಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಮಾಜಿ ಅಧ್ಯಕ್ಷ ರವಿ, ಮುಖಂಡರಾದ ರಾಮಚಂದ್ರ, ಸುರೇಶ್, ಶಿವರಾಜ್, ಆಶಾ ವಿವಿಧ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಇದ್ದರು.
