ಪಿರಿಯಾಪಟ್ಟಣ: ಪ್ರಜೆಗಳಿಗೆ ಸಾಮಾಜಿಕ ನ್ಯಾಯ ನೀಡುವ ಮೂಲಕ ಸುಭದ್ರ ಆಡಳಿತ ನಡೆಸಿದ ಕೆಂಪೇಗೌಡರ ಹೆಸರು ಅಜರಾಮರ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ಶ್ರೀ ಕನ್ನಂಬಾಡಿಯಮ್ಮ ದೇವಾಲಯ ಬಳಿ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಮತ್ತು  ಕೆಂಪೇಗೌಡ ಥೀಮ್ ಪಾರ್ಕ್  ಉದ್ಘಾಟನಾ ಕಾರ್ಯಕ್ರಮ ಅಂಗವಾಗಿ ಮೃತ್ತಿಕೆ (ಮಣ್ಣು) ಸಂಗ್ರಹದ ವಾಹನವನ್ನು ತಾಲ್ಲೂಕಿಗೆ ಬರಮಾಡಿಕೊಂಡು ಮಣ್ಣು ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಸಮಾಜದಲ್ಲಿ ಯಾವುದೇ ವ್ಯಕ್ತಿ ಜನಪರ ಕಾರ್ಯಗಳನ್ನು ನಿರ್ವಹಿಸಿದಾಗ ಅವರ ಹೆಸರು ಜನಮನ್ನಣೆಯಾಗಿ ಎಲ್ಲರ ಮನಸ್ಸಿನಲ್ಲಿರುತ್ತದೆ ಎಂಬುದಕ್ಕೆ ನಾಡಪ್ರಭು ಕೆಂಪೇಗೌಡರು ಉತ್ತಮ ಉದಾಹರಣೆಯಾಗಿದ್ದಾರೆ ಎಂದರು.

ತಂಬಾಕು ಮಂಡಳಿ ಉಪಾಧ್ಯಕ್ಷ ಮಾಜಿ ಶಾಸಕ ಎಚ್.ಸಿ ಬಸವರಾಜು ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡರ ಜೀವನ ಆದರ್ಶ ಮತ್ತು ಆಡಳಿತ ವೈಖರಿ ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಂಪೇಗೌಡರ ಪ್ರತಿಮೆ ಮತ್ತು ಥೀಮ್ ಪಾರ್ಕ್ ಉದ್ಘಾಟಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಮಾತನಾಡಿ ಮಣ್ಣು ಸಂಗ್ರಹಕ್ಕೆ ಆಗಮಿಸಿರುವ ಕೆಂಪೇಗೌಡರ ರಥ ತಾಲ್ಲೂಕಿನ ಎಲ್ಲ ಗ್ರಾ.ಪಂ ವ್ಯಾಪ್ತಿಯಲ್ಲಿ ನ.4 ಮತ್ತು 5 ರಂದು ಸಂಚರಿಸಲಿದೆ ಇದಕ್ಕಾಗಿ ಈಗಾಗಲೇ ಅಗತ್ಯ ಪೂರ್ವ ಸಿದ್ಧತೆಗಳನ್ನು ತಾ.ಪಂ ವತಿಯಿಂದ ಕೈಗೊಳ್ಳಲಾಗಿದೆ ಎಂದರು.

ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಮತ್ತು ಥೀಮ್ ಪಾರ್ಕ್ ಅನಾವರಣದ ಕಾರ್ಯಕ್ರಮಕ್ಕೆ ತಾಲ್ಲೂಕಿನಲ್ಲಿ ಚಾಲನೆ ನೀಡುವ ಮೂಲಕ 2 ದಿನ ಕಾಲ ತಾಲ್ಲೂಕು ಆಡಳಿತ ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭ ಪುರಸಭ ಅಧ್ಯಕ್ಷ ಕೆ.ಮಹೇಶ್, ಉಪಾಧ್ಯಕ್ಷೆ ಆಶಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ ಹಾಗೂ ಸದಸ್ಯರು, ಮುಖ್ಯಾಧಿಕಾರಿ ಮಹೇಂದ್ರ ಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಬಿಜೆಪಿ ಮುಖಂಡ ಕೌಲನಹಳ್ಳಿ ಸೋಮಶೇಖರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top