ಪಿರಿಯಾಪಟ್ಟಣದಲ್ಲಿ ನಡೆದ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು

ಪಿರಿಯಾಪಟ್ಟಣ: ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಕೀರ್ತನೆಗಳನ್ನು ರಚಿಸಿ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ದಾಸಶ್ರೇಷ್ಠರು ಕನಕದಾಸರು ಎಂದು ಕಂಪಲಾಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶಿವರಾಜ್ ಹೊನ್ನಿಕುಪ್ಪೆ ತಿಳಿಸಿದರು.

ಪಟ್ಟಣದ ಅರಸು ಕಲಾಭವನದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆದ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು, ಸಮಾಜದಲ್ಲಿದ್ದ ಅಸಮಾನತೆ ಜಾತಿ ಮತ ಕುಲ ಭೇದಭಾವವನ್ನು ಹೋಗಲಾಡಿಸಿ ಸಾಮಾಜಿಕ ಪಿಡುಗುಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಗೀತೆಗಳನ್ನು ರಚಿಸಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ದಾಸಶ್ರೇಷ್ಠರಲ್ಲಿ ಕನಕದಾಸರು ಅಗ್ರಗಣ್ಯರು ಎಂದರು. 

ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಎಚ್.ಡಿ ಗಣೇಶ್ ಅವರು ಮಾತನಾಡಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಶ್ರೀ ಕನಕದಾಸರು ಸಮಾಜದ ಬದಲಾವಣೆಗೆ ಶ್ರಮಿಸಿದ್ದರು, ತಳ ಸಮುದಾಯಗಳ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧ ಕೀರ್ತನೆಗಳ ಮೂಲಕ ಧ್ವನಿ ಎತ್ತಿದ್ದರು, ತಾಲ್ಲೂಕಿನಲ್ಲಿ ಹಲವೆಡೆ ಕನಕ ಸಮುದಾಯ ಭವನ ನಿರ್ಮಾಣಕ್ಕೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನೀಡಿದ ಹಣವನ್ನು  ಬೇರೆ ಸಮುದಾಯಗಳಿಗೆ ವರ್ಗಾಯಿಸಿರುವುದು ಖಂಡನೀಯ ಎಂದರು.

ಶಾಸಕ ಕೆ.ಮಹದೇವ್ ಅವರು ಮಾತನಾಡಿ ಜನಸಾಮಾನ್ಯರಿಗೂ ಭಗವಂತ ಕಾಣುವ ಅವಕಾಶ ಇರಬೇಕೆಂದು ಕನಕದಾಸರ ಹಂಬಲ ಮತ್ತು ಎಲ್ಲರನು ಪ್ರೀತಿಸುವ ಕನಕ ತತ್ವವೇ ಇಂದಿನ ಪೀಳಿಗೆಗೆ ಆದರ್ಶವಾಗಬೇಕು, ಕುಲ ಕುಲ ಎಂದು ಹೊಡೆದಾಡದೆ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ ಮಹಾನ್ ಸಂತ ಎಂದರು, ಹೆಚ್.ಡಿ ಗಣೇಶ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ ಶಾಸಕನಾದ ನಂತರ ಸರ್ವ ಧರ್ಮ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಕನಕ ಸಮಾಜದ ಸಮುದಾಯ ಭವನ ಅನುದಾನವನ್ನು ಇತರೆ ಸಮಾಜಕ್ಕೆ ನೀಡಿದ್ದೇನೆ ಎಂದು ಅಂಕಿ ಅಂಶಗಳ ದಾಖಲೆ ನೀಡಿದರೆ ರಾಜೀನಾಮೆಗೆ ಸಿದ್ಧ ಎಂದು ಸವಾಲು ಹಾಕಿದರು.

ಈ ಸಂದರ್ಭ ಪುರಸಭಾ ಅಧ್ಯಕ್ಷ ಕೆ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ ಹಾಗೂ ಸದಸ್ಯರು, ಟಿಎಪಿಸಿಎಂಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ, ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಚೆಸ್ಕಾಂ ಎಇಇ ಸುನಿಲ್ ಯಾದವ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಸಿಡಿಪಿಒ ಮಮತಾ, ಟಿಎಚ್ಒ ಡಾ.ಶರತ್ ಬಾಬು, ಕುರುಬ ಸಮಾಜದ ತಾಲ್ಲೂಕು ಗೌರವಾಧ್ಯಕ್ಷ ಡಿ.ಜವರಪ್ಪ, ಜಿ.ಪಂ ಮಾಜಿ ಸದಸ್ಯ ಶಿವಣ್ಣ, ವಿವಿಧ ಇಲಾಖೆ ಅಧಿಕಾರಿಗಳು ಸಮಾಜದ ಮುಖಂಡರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top