ಪಿರಿಯಾಪಟ್ಟಣ: ಶಾಸಕನಾದ ನಂತರ ಪಕ್ಷಾತೀತವಾಗಿ ತಾಲ್ಲೂಕಿನ ಸರ್ವ ಧರ್ಮದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ಕುಂಬಾರ ಬೀದಿಯಲ್ಲಿ 14 ಲಕ್ಷ ವೆಚ್ಚದ ಮಸ್ಜಿದ್ ಇ ಮಾಮೂರ್ ಹಾಗೂ ಒಕ್ಕಲಿಗರ ಬೀದಿಯಲ್ಲಿ 40 ಲಕ್ಷ ವೆಚ್ಚದ ಶ್ರೀರಾಮ ಮಂದಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಕಳೆದೆರಡು ಚುನಾವಣೆಯಲ್ಲಿ ಪಟ್ಟಣದ ಜನತೆ ನನಗೆ ಹೆಚ್ಚು ಮತ ನೀಡಿದ್ದರೆ ಅಂದೇ ಶಾಸಕನಾಗಿ ಯಾವುದೇ ಸಮಸ್ಯೆಗಳು ಇರದಂತೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೆ ವಿರೋಧಿಗಳ ಅಪಪ್ರಚಾರ ಹಾಗೂ ಪಟ್ಟಣದ ಯಾವುದೇ ವ್ಯಕ್ತಿ ಶಾಸಕನಾಗುವುದಿಲ್ಲ ಎಂಬ ಹಣೆಪಟ್ಟಿ ಕಳಚಿ ತಾಲ್ಲೂಕಿನ ಜನತೆಯ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾದ ಬಳಿಕ ಸರ್ವ ಜನಾಂಗದ ಹಿತ ಕಾಪಾಡುವ ದೃಷ್ಟಿಯಲ್ಲಿ ಹಂತ ಹಂತವಾಗಿ ಸಮನಾಗಿ ಅನುದಾನ ನೀಡಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದರು.

ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರು ಮಾತನಾಡಿ ನಮ್ಮ ತಂದೆ ಹಾಗೂ ನಾನು ನಮ್ಮ ಬಳಿ ಅಧಿಕಾರವಿಲ್ಲದಿದ್ದ ಸಂದರ್ಭದಿಂದಲೂ ತಾಲ್ಲೂಕಿನ ಜನತೆಯ ಕಷ್ಟ ಸುಖಗಳಿಗೆ ಸ್ಪಂದಿಸಿದ್ದು ಶಾಸಕರಾದ ಬಳಿಕ ತಾಲ್ಲೂಕಿನಾದ್ಯಂತ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮುಂಬರುವ ಚುನಾವಣೆಯಲ್ಲಿಯೂ ಆಶೀರ್ವದಿಸುವಂತೆ ಕೋರಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಅವರು ಮಾತನಾಡಿ ಈ ಹಿಂದೆ ತಾಲ್ಲೂಕಿನಲ್ಲಿ ಶಾಸಕರಾಗಿದ್ದವರ ಅಭಿವೃದ್ಧಿ ಕಾರ್ಯಗಳು ಹಾಗೂ ಕೆ.ಮಹದೇವ್ ಅವರು ಮೊದಲನೇ ಬಾರಿಗೆ ಶಾಸಕರಾದ ಬಳಿಕ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮತ್ತೊಮ್ಮೆ ಅವರನ್ನು ಶಾಸಕರಾಗಲು ಅವಕಾಶ ನೀಡುವಂತೆ ಕೋರಿದರು.

ಈ ಸಂದರ್ಭ ಪುರಸಭಾ ಅಧ್ಯಕ್ಷ ಕೆ.ಮಹೇಶ್, ಸದಸ್ಯರಾದ ಪ್ರಕಾಶ್ ಸಿಂಗ್, ಆಶಾ, ಪುಷ್ಪಲತಾ, ಮಂಜುನಾಥ್ ಸಿಂಗ್, ಮಾಜಿ ಸದಸ್ಯ ಸಣ್ಣಪ್ಪನಾಯಕ, ಮುಖಂಡರಾದ ಕುಮಾರ್, ರಾಜಣ್ಣ, ಜೆ. ಮೋಹನ್, ಸ್ವಾಮಿಗೌಡ, ಸುರೇಶ್, ಕೀರ್ತಿ ಹಾಗೂ ಸ್ಥಳೀಯ ಮುಖಂಡರು ಗ್ರಾಮಸ್ಥರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top