ಪಿರಿಯಾಪಟ್ಟಣ: ಸಮಾಜದ ಬದಲಾವಣೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸಲಿದೆ ಎಂದು ಬಿಇಓ ಬಸವರಾಜು ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಒಕ್ಕಲಿಗರ ವರ್ತಕರ ಸಂಘ ವತಿಯಿಂದ ನಡೆದ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಪೋಷಕರು ತಮ್ಮ ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಮೈಗೂಡಿಸಿಕೊಳ್ಳುವುದನ್ನು ಕಲಿಸಬೇಕಿದೆ ಎಂದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ವ್ಯವಸಾಯ ವೃತ್ತಿಯಲ್ಲಿದ್ದ ಒಕ್ಕಲಿಗರಿಗೆ ವ್ಯಾಪಾರ ಮಾಡಲು ಬಂದ ಸಂದರ್ಭದಲ್ಲಿ ಸಂಘದ ರಚನೆಯ ಮೂಲಕ ಬೆಂಬಲ ನೀಡಿದ್ದರಿಂದ ಹೆಚ್ಚಿನ ಮಟ್ಟದಲ್ಲಿ ಇಂದು ವ್ಯಾಪಾರಸ್ಥರಾಗಿರುವುದು ಹೆಮ್ಮೆಯ ವಿಷಯವಾಗಿದೆ, ವ್ಯಾಪಾರ ವೃತ್ತಿ ಒಂದು ವರ್ಗದವರಿಗೆ ಮಾತ್ರ ಸೀಮಿತವಾಗಿತ್ತು ಇಂತಹ ಸಂದರ್ಭದಲ್ಲಿ ನಾನು ಮತ್ತಿತರರ ಸ್ನೇಹಿತರು ಒಕ್ಕಲಿಗರ ವರ್ತಕರ ಸಂಘ ರಚಿಸಿ ಸಮುದಾಯಕ್ಕೆ ನೈತಿಕ ಬೆಂಬಲ ನೀಡಲಾಯಿತು ಸಂಸ್ಥೆಯ ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದರು.
ಕಸಾಪ ನಿಕಟ ಪೂರ್ವ ಅಧ್ಯಕ್ಷ ಗೊರಹಳ್ಳಿ ಜಗದೀಶ್ ಅವರು ಮಾತನಾಡಿ ವಿದ್ಯೆ ಯಾರ ಸ್ವತ್ತಲ್ಲ ಶ್ರದ್ಧೆಯಿಂದ ಕಲಿತವರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗಲಿದೆ ಅಂತಹವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸಕರ ಎಂದರು.
ಆದಿಚುಂಚನಗಿರಿ ಮೈಸೂರು ಶಾಖಾಪೀಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು, ವಿವಿಧ ಸರ್ಕಾರಿ ಶಾಲೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಒಕ್ಕಲಿಗ ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್ ರಾಜೇಗೌಡ, ನಿಕಟಪೂರ್ವ ಅಧ್ಯಕ್ಷ ನಂದಿನಿ ಕೃಷ್ಣೇಗೌಡ, ಉಪಾಧ್ಯಕ್ಷ ಎಂ.ಬಿ ಸಂಪತ್, ಕಾರ್ಯದರ್ಶಿ ಡಿ.ಜೆ ಗಣೇಶ್, ಖಜಾಂಜಿ ಟಿ.ಎಸ್ ಹರೀಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ರೋಟರಿ ಐಕಾನ್ ಅಧ್ಯಕ್ಷ ಕೆ.ರಮೇಶ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗೇಂದ್ರ, ಮುಖಂಡರಾದ ಭುಜಂಗ, ಕರಿಯಪ್ಪ, ಮತ್ತು ಸಂಘದ ನಿರ್ದೇಶಕರು ಸದಸ್ಯರು ಇದ್ದರು.