ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ಮಾಡದೆ ನಿಷ್ಪಕ್ಷಪಾತವಾಗಿ ಅನುದಾನ ನೀಡಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀದಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಬೆಟ್ಟದಪುರ ಸಮೀಪದ ಕುಮಾರಿಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಸಂಜೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ನೆರವೇರಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಜಾತಿ, ಸಮಾಜ ಎಂದು ಭೇದಭಾವ ಮಾಡದೇ ಸಮಾನವಾಗಿ ಎಲ್ಲ ವರ್ಗದವರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಇಷ್ಟಾದರೂ ಕೂಡ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುವ ಮಾಜಿ ಶಾಸಕರು ತಮ್ಮ ಮೂವತ್ತು ವರ್ಷದ ಅವಧಿಯ ಆಡಳಿತದಲ್ಲಿ ತಾಲೂಕಿಗೆ ಕೊಟ್ಟಂತ ಕೊಡುಗೆಗಳು ಏನು ಎಂಬುದನ್ನು ಜನರಿಗೆ ಮೊದಲು ತಿಳಿಸಲಿ ಎಂದು ಪ್ರಶ್ನೆ ಹಾಕಿದರು.
ಬೇರೆ ತಾಲೂಕಿನ ಹಲವಾರು ಶಾಸಕರು ಪಿರಿಯಾಪಟ್ಟಣದ ಕೆ.ಮಹದೇವ್ ಅವರೊಬ್ಬರಿಗೆ ಸರ್ಕಾರದ ಅನುದಾನ ಹೇಗೆ ಸಿಗುತ್ತಿದೆ ನಮಗೆಲ್ಲ ಏಕೆ ಸಿಗುತ್ತಿಲ್ಲ ಎಂದು ಈಗಾಗಲೇ ಸರ್ಕಾರ ಮಟ್ಟದಲ್ಲಿ ಪ್ರಶ್ನೆ ಹಾಕಿದ್ದಾರೆ. ನಾನು ತಾಲೂಕಿಗೆ ಅನುದಾನ ತರಬೇಕೆಂದರೆ ಅಭಿವೃದ್ಧಿ ಕೆಲಸದ ಕಡತನ್ನು ತೆಗೆದುಕೊಂಡು ಹೋಗಿ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳ ಮುಂದೆ ನಿಂತು ಅನುಮೋದನೆ ಮಾಡಿಸಿಕೊಂಡು ಬರುತ್ತಿದ್ದೇನೆ. ಅಲ್ಲದೆ ಪ್ರತಿಯೊಬ್ಬ ಸಚಿವರು ಸೇರಿದಂತೆ ಎಲ್ಲಾ ಶಾಸಕರೊಂದಿಗೆ ವಿಶ್ವಾಸದಿಂದ ಇದ್ದೇನೆ. ಈ ಕಾರಣದಿಂದಲ್ಲೇ ನಮ್ಮ ತಾಲೂಕಿನಲ್ಲಿ ಹೆಚ್ಚಿನ ಅಭಿವೃದ್ಧಿ ಆಗುತ್ತಿರುವುದು ಎಂದರು.
ಬೈಕ್ ರ್ಯಾಲಿ: ಶುಕ್ರವಾರ ಸಂಜೆ ಚಪ್ಪರದಹಳ್ಳಿ ಗ್ರಾಮಕ್ಕೆ ಶಾಸಕ ಕೆ.ಮಹದೇವ್ ಆಗಮಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಹಾಗೂ ಯುವಕರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಬಳಿಕ ಬೈಕ್ ರ್ಯಾಲಿ ಮೂಲಕ ಕುಮಾರಿ ಕೊಪ್ಪಲು ಗ್ರಾಮಕ್ಕೆ ಬರಮಾಡಿಕೊಂಡರು.
ಇದೆ ವೇಳೆ ಸತ್ಯಗಾಲ,ಆನಂದನಗರ,ಹುಣಸೆತೊಪ್ಪಲು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿದ್ಯಾಶಂಕರ್, ಕಾರ್ಯಾಧ್ಯಕ್ಷ ಸಿ.ಎಸ್ ಕುಶಾಲ್, ರೈತ ಘಟಕದ ಅಧ್ಯಕ್ಷ ಬಿ.ಜೆ ದೇವರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್ ದೇವೇಗೌಡ, ಸದಸ್ಯರಾದ ಸಿ.ಕೆ ವೆಂಕಟೇಶ್, ಸಿ.ಪಿ ಸುರೇಶ್, ಸಿ.ಎಸ್ ಗಣೇಶ್, ಜಯಶ್ರೀಸ್ವಾಮಿ, ಲೋಕೋಪಯೋಗಿ ಎಇಇ ವೆಂಕಟೇಶ್, ಜೆಇ ಕುಮಾರ್, ವೈದ್ಯಕಾಧಿಕಾರಿ ಡಾ.ಸಂದೀಪ್, ಪಿಡಿಒ ಶ್ರೀದೇವಿ, ಮುಖಂಡರಾದ ಅತ್ತರ್ ಮತ್ತೀನ್, ಮಲ್ಲಿಕಾರ್ಜುನ್, ಸುರಗಳ್ಳಿ ರವಿ, ಕಾಳೇಗೌಡ, ಪುಟ್ಟಭೋವಿ, ರಾಮಚಂದ್ರ, ಪಟೇಲ್ ನಟೇಶ್ ಸೇರಿದಂತೆ ಡೈರಿ ಹಾಗೂ ಸೊಸೈಟಿ ನಿರ್ದೇಶಕರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಇದ್ದರು.