ಪಿರಿಯಾಪಟ್ಟಣ: ಸರ್ವರೂ ಸಮಾನತೆಯಿಂದ ಬಾಳುವ ಉದ್ದೇಶದಿಂದ ಸಂವಿಧಾನ ರಚಿಸಿದ ಕೀರ್ತಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಪ್ರತಿಯೊಬ್ಬರಿಗೂ ಕಾನೂನಿನ ಅರಿವಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾಜದಲ್ಲಿ ನೊಂದವರ ಪರ ನಿಲ್ಲಲು ಸಂವಿಧಾನ ರಚಿಸಿ ವಿಶ್ವ ಶ್ರೇಷ್ಠ ನಾಯಕರಾಗಿ ಹೊರಹೊಮ್ಮಿದವರು ಡಾ.ಬಿ.ಆರ್ ಅಂಬೇಡ್ಕರ್ ಎಂದು ಬಣ್ಣಿಸಿದರು.
ಶಿಕ್ಷಕ ಪುಟ್ಟಮಾದಯ್ಯ ಅವರು ಪ್ರಧಾನ ಭಾಷಣಕಾರರಾಗಿ ಮಾತನಾಡಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಹಾಗೂ ರಾಜಕೀಯವಾಗಿ ನಾವೆಲ್ಲರೂ ನೆಮ್ಮದಿಯಿಂದ ಬಾಳಲು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಕಾರಣವಾಗಿದೆ, ಮೂಕ ನಾಯಕ ಬಹಿಷ್ಕೃತ ಭಾರತ, ಜನತಾ ಪತ್ರಿಕೆ ಹಾಗೂ ಪ್ರಮುಖ ಭಾರತ ಎಂಬ ಪತ್ರಿಕೆಗಳನ್ನು ಸ್ಥಾಪಿಸಿ ಸಮಾಜದಲ್ಲಿ ಧ್ವನಿ ಇಲ್ಲದವರ ಪರ ಕರ್ತವ್ಯ ನಿರ್ವಹಿಸಿದ ಮಹಾನ್ ನಾಯಕ ಎಂದರು.
ತಾ.ಪಂ ಇಓ ಸಿ.ಆರ್ ಕೃಷ್ಣಕುಮಾರ್, ತಹಸಿಲ್ದಾರ್ ಕೆ.ಚಂದ್ರಮೌಳಿ, ಪ್ರೌಢಶಾಲಾ ಶಿಕ್ಷಕ ಎನ್.ಆರ್ ಕಾಂತರಾಜು, ದಸಂಸ ಮುಖಂಡ ತಮ್ಮಣ್ಣಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಬಿಇಓ ಬಸವರಾಜು, ಭೀಮ್ ಅರ್ಮಿ ಸಂಘಟನೆ ತಾಲೂಕು ಅಧ್ಯಕ್ಷ ಗಿರೀಶ್ ಮಾತನಾಡಿದರು.
ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಟಿಹೆಚ್ಓ ಡಾ.ಶರತ್ ಬಾಬು, ಎಡಿಎಲ್ ಆರ್ ಚಿಕ್ಕಣ್ಣ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಕುಮಾರ್,
ಆರ್ ಡಬ್ಲ್ಯೂಎಸ್ ಇಲಾಖೆ ಎಇಇ ಹಿತೇಂದ್ರ, ಸಿಡಿಪಿಓ ಮಮತಾ, ಆರ್ ಎಫ್ಓ ಕಿರಣ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ತಾಲೂಕು ಆಡಳಿತ ಕಚೇರಿ ಸಿಬ್ಬಂದಿ ಹಾಗೂ ಸಮಾಜದ ಮುಖಂಡರು ಇದ್ದರು.