ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು,1948 ರ ಡಿ.10 ರಂದು ಎಲ್ಲರ ಸಮಾನತೆಗಾಗಿ ವಿಶ್ವಸಂಸ್ಥೆಯು ಈ ದಿನವನ್ನು ಜಾರಿಗೆ ತಂದಿದ್ದು 75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವವನ್ನು ಆಚರಿಸಿದ ರೀತಿಯಲ್ಲಿಯೇ 75 ನೇ ವರ್ಷದ ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಿದಲ್ಲಿ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡುತ್ತಿತ್ತು, ಕೋವಿಡ್ ಸಂದರ್ಭದಲ್ಲಿ ಜೀವ ಭಯವನ್ನು ತೊರೆದು ನಿಷ್ಪಕ್ಷಪಾತವಾಗಿ ದುಡಿದ ಅಂಗನವಾಡಿ ಕಾರ್ಯಕರ್ತರಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ತಾಲೂಕಿನಲ್ಲಿ ಗರ್ಭಿಣಿ ಮಹಿಳೆಯರಿಗೆ ನಡೆಸಿದ ಸೀಮಂತ ಕಾರ್ಯಕ್ರಮದಿಂದ ಪ್ರೇರೇಪಿತನಾಗಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇನೆ, ವೃತ್ತಿಯಲ್ಲಿ ಅಸಹಾಯಕತೆಯನ್ನು ತೋರದೆ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿದಾಗ ಅಸಾಧ್ಯವೆನಿಸುವ ಕೆಲಸಗಳನ್ನು ಸುಲಲಿತವಾಗಿ ಮಾಡಬಹುದು ಎಂದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದಿಂದ ಮಾನವ ಹಕ್ಕುಗಳ ಪರಿಪಾಲನೆ ಮಾಡುವುದು ಅತ್ಯವಶ್ಯಕವಾಗಿದೆ, ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಬೇಕಿದೆ, ತಳಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಕೋವಿಡ್ ಸಂದರ್ಭದಲ್ಲಿ ನೀಡಿದ ಸೇವೆ ನಿಜಕ್ಕೂ ಶ್ಲಾಘನೀಯವಾದುದಾಗಿದೆ ಎಂದರು.
ಸಿಡಿಪಿಓ ಮಮತಾ ಅವರು ಮಾತನಾಡಿ ಮಾನವ ಹಕ್ಕುಗಳ ಉಲ್ಲಂಘನೆ ಸಮಾಜದ ಹಲವು ವಿಭಾಗಗಳಲ್ಲಿ ಕಂಡುಬರುತ್ತಿದ್ದು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕಿದೆ, ಅಂಗನವಾಡಿ ನೌಕರರು ಹಾಗೂ ಸಿಬ್ಬಂದಿ ಸೇವೆ ಮನಗಂಡು ಶಾಸಕರು ಅಭಿನಂದಿಸುತ್ತಿರುವುದು ಶ್ಲಾಘನಿಯ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ 700 ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಶಾಸಕ ಕೆ.ಮಹದೇವ್ ಸೀರೆಗಳನ್ನು ಕೊಡುಗೆಯಾಗಿ ನೀಡಿದರು, ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸಿಕೊಟ್ಟ ನೃತ್ಯ ಗಾಯನ ಪ್ರೇಕ್ಷಕರನ್ನು ರಂಜಿಸಿತು.
ಈ ಸಂದರ್ಭ ತಹಸಿಲ್ದಾರ್ ಕೆ.ಚಂದ್ರಮೌಳಿ, ಪುರಸಭೆ ಅಧ್ಯಕ್ಷ ಕೆ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ ಸದಸ್ಯರಾದ ಮಂಜುನಾಥ್ ಸಿಂಗ್, ಪ್ರಕಾಶ ಸಿಂಗ್, ಭಾರತಿ, ಪುಷ್ಪ, ಮುಖ್ಯಾಧಿಕಾರಿ ಮಹೇಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಎ ನಾಗೇಂದ್ರ, ನಿರ್ದೇಶಕಿ ಸುನಿತ ಮಂಜುನಾಥ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಸಹಾಯಕ ಸಿಡಿಪಿಓ ಅಶೋಕ್, ಮುಖಂಡರಾದ ಎ.ಟಿ ರಂಗಸ್ವಾಮಿ, ಎಸ್.ರಾಮು, ಗಗನ್, ಟಿ.ರಘುನಾಥ್, ಕೆ.ಆರ್ ಕೆಂಪಣ್ಣ, ಜಿ.ಪಂ ಎಇಇ ಮಲ್ಲಿಕಾರ್ಜುನ್, ಪಿಡಬ್ಲ್ಯೂಡಿ ಎಇಇ ವೆಂಕಟೇಶ್, ಆರ್ ಡಬ್ಲ್ಯೂಎಸ್ ಇಲಾಖೆ ಎಇಇ ಬಿ.ಸಿ ಹಿತೇಂದ್ರ ಮತ್ತಿತರಿದ್ದರು.