ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಗ್ರಾಮಾಂತರ ಭಾಗಕ್ಕೆ ತೆರಳಿ ನಮ್ಮ ಬಗ್ಗೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಲು ಮುಂದಾಗಿದ್ದಾರೆ ಎಂದು ಶಾಸಕ ಕೆ. ಮಹದೇವ್ ಮಾಜಿ ಶಾಸಕ ಕೆ. ವೆಂಕಟೇಶ್ ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧ ಗಂಭೀರವಾಗಿ ಆರೋಪಿಸಿದರು.
ಸಮೀಪದ ಗೊರಹಳ್ಳಿ ಗ್ರಾಮದಲ್ಲಿ ಸೋಮವಾರ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಅವರು. ನಾನು ಗ್ರಾಮಾಂತರ ಭಾಗದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ನನ್ನ ಹಾಗೂ ನನ್ನ ಮಗನ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ತಾಲೂಕಿನಾದ್ಯಂತ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಈಗಾಗಲೇ ನಾನು ಮಾಡಿರುವ ಅಭಿವೃದ್ಧಿ ಕೆಲಸದಿಂದ ಜನರಿಂದ ಪ್ರಶಂಸೆ ಸಿಕ್ಕಿದೆ, ಚುನಾವಣೆಗೆ ಸಿದ್ಧತೆಗೊಂಡಿರುವ ನೀವು ಮಾಡಿರುವ ಕೆಲಸಗಳನ್ನು ಸಾರ್ವಜನಿಕರ ಮುಂದಿಟ್ಟು ತಮ್ಮ ಮತ ಕೇಳಬೇಕೆ ಹೊರತು ಮತ್ತೊಬ್ಬರನ್ನು ಟೀಕಿಸಿ ಮಾತನಾಡುವುದು ನಿಮ್ಮ ರಾಜಕಾರಣಕ್ಕೆ ಶೋಭೆ ತರುವ ವಿಚಾರವಲ್ಲ ಎಂದು ಕಿಡಿಕಾರಿದರು.
ಕಾರ್ಯಕ್ರಮದ ಮುನ್ನ ಗ್ರಾಮಕ್ಕೆ ಆಗಮಿಸಿದ ಶಾಸಕ ಕೆ ಮಹದೇವರನ್ನು ವಾದ್ಯ ಮೇಳಗಳೊಂದಿಗೆ ಗ್ರಾಮಕ್ಕೆ ಬರಮಾಡಿಕೊಂಡು ಗ್ರಾಮ ದೇವತೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಗ್ರಾಮಸ್ಥರು ಅಭಿವೃದ್ಧಿವಾಗಿ ಸ್ವಾಗತಿಸಿದರು.
ಇದೆ ವೇಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಒಂದು ಕೊಠಡಿಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರಿಂದ ಶಾಸಕ ಕೆ.ಮಹದೇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡ ರವಿ ವಿದ್ಯಾಶಂಕರ್, ಪಟೇಲ್ ನಟೇಶ್, ವಸಂತ್, ಪುನೀತ್, ಹರೀಶ್, ಮುನಫ್, ಅತ್ತರ್ ಮತಿನ್, ಸ್ವಾಮಿ, ಸುರೇಶ್, ಧರಣೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.