ಪಿರಿಯಾಪಟ್ಟಣ: ನಾಲ್ಕುವರೆ ವರ್ಷಗಳ ಕಾಲ ವಿಲಾಸಿ ಜೀವನ ನಡೆಸುತ್ತಿದ್ದ ಮಾಜಿ ಶಾಸಕ ಕೆ.ವೆಂಕಟೇಶ್ ಚುನಾವಣೆ ಸಮೀಪಿಸುತ್ತಿದ್ದಂತೆ ಗ್ರಾಮಗಳಿಗೆ ಭೇಟಿ ನೀಡಿ ನನ್ನ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಮಹದೇವ್ ಆರೋಪಿಸಿದರು.
ತಾಲೂಕಿನ ಸುಂಡವಳು ಗ್ರಾಮದಲ್ಲಿ 1.15 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ತಾಲೂಕಿನ ಮತದಾರರನ್ನು ನಿರ್ಲಕ್ಷಿಸಿದ್ದವರಿಗೆ ಏಕಾಏಕಿ ಜ್ಞಾನೋದಯವಾಗಿ ಮತದಾರರ ನೆನಪಾಗುತ್ತಿದೆ, ತಾಲೂಕಿನ ಪ್ರಜ್ಞಾವಂತ ಮತದಾರರು ಇದ್ಯಾವುದಕ್ಕೂ ಮಣೆ ನೀಡದೆ ನನ್ನ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮುಂಬರುವ ಚುನಾವಣೆಯಲ್ಲಿಯೂ ಬೆಂಬಲಿಸುವ ವಿಶ್ವಾಸವಿದೆ, ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮತ ಎಂಬ ಕುಾಲಿ ನೀಡುವ ಮೂಲಕ ಮತ್ತೊಮ್ಮೆ ತಾಲೂಕಿನ ಸರ್ವಾಂಗಿಣ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು, ಶಾಸಕ ಸ್ಥಾನದ ಜವಾಬ್ದಾರಿ ಅರಿಯದ ಮಾಜಿ ಶಾಸಕರು ಅಧಿಕಾರವಧಿಯಲ್ಲಿ ವಿಲಾಸಿ ಹಾಗೂ ದರ್ಪದ ಆಡಳಿತಕ್ಕೆ ಒತ್ತು ನೀಡಿ ತಾಲೂಕಿನ ಅಭಿವೃದ್ಧಿ ಕಡೆಗಣಿಸಿದ್ದರು, ನಾನು ಹಾಗೂ ನನ್ನ ಮಗನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಅಪ್ಪ ಮಕ್ಕಳು ಸುಳ್ಳಿನ ಮೂಟೆ ಹೊತ್ತು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದಿರುವುದು ಸತ್ಯಕ್ಕೆ ದೂರವಾದ ವಿಚಾರ, ಅವರ ಅವಧಿಯಲ್ಲಿ ಎಷ್ಟು ಜನ ನಿರುದ್ಯೋಗಿಗಳಿಗೆ ಅವರು ಕೆಲಸ ನೀಡಿದ್ದರು ಎಂಬುದನ್ನು ಬಹಿರಂಗ ಸಭೆಯಲ್ಲಿ ಉತ್ತರಿಸಲಿ ಎಂದು ಸವಾಲೆಸೆದರು.
ಪಕ್ಷ ಸೇರ್ಪಡೆ: ಈಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಸುಂಡವಾಳು ಗ್ರಾಮದ ವೆಂಕಟೇಶ್ ಅವರ ಸಮ್ಮುಖದಲ್ಲಿ ಗ್ರಾಮದ ಹಲವು ಮುಖಂಡರು ಶಾಸಕ ಕೆ.ಮಹದೇವ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್ ಸೇರಿದರು, ಗ್ರಾಮಕ್ಕಾಗಮಿಸಿದ ಶಾಸಕರನ್ನು ಮಂಗಳವಾದ್ಯದೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಹೂ ಮಳೆ ಸುರಿಸುವ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.