ಸಹಿಸದೆ ಸಲ್ಲದ ಆರೋಪ ಶಾಸಕ ಕೆ.ಮಹದೇವ್ ಬೇಸರ

ಬೆಟ್ಟದಪುರ: ಇಷ್ಟು ದಿನ ಸುಮ್ಮನಿದ್ದ ಕಾಂಗ್ರೆಸ್ ಮುಖಂಡರು ಚುನಾವಣೆ ಸಮೀಪ ಬರುತ್ತಿದ್ದಂತೆ ಗ್ರಾಮಾಂತರ ಭಾಗಕ್ಕೆ ತೆರಳಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಲು ಮುಂದಾಗಿದ್ದಾರೆ. ಜನರು ಅವರ ಮಾತುಗಳಿಗೆ ಕಿವಿಗೂಡಬಾರದು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದಲ್ಲಿ ಶುಕ್ರವಾರ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ತಾಲೂಕಿನಾದ್ಯಂತ ನನ್ನ ಅಧಿಕಾರ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಮೈ ಪರಚಿಕೊಳ್ಳುತ್ತಿರುವ ವಿರೋಧಿಗಳು ಚುನಾವಣೆ ಸಮೀಪದಲ್ಲಿ ಇರುವ ಹಿನ್ನಲೆ ನನ್ನ ಮತ್ತು ನನ್ನ ಪುತ್ರನ ಮೇಲೆ ಗ್ರಾಮಾಂತರ ಪ್ರದೇಶಗಳಲ್ಲಿ ಇಲ್ಲಸಲ್ಲದನ್ನು ಹೇಳಿಕೊಂಡು ಓಡಾಡುತ್ತಿದ್ದಾರೆ. ಆರೋಪ ಮಾಡಿದರೆ ಸಾಲದು ಮೊದಲು ಅದನ್ನು ಸಾಬೀತುಪಡಿಸಲಿ ಎಂದರು.
ಶಾಸಕನಾಗಿ, ಸಚಿವನಾಗಿ ಮೂವತ್ತು ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಮಾಜಿ ಶಾಸಕರು ತಾಲೂಕಿನ ಅಭಿವೃದ್ಧಿಗೆ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಮೊದಲು ಅವರ ಅನುಯಾಯಿಗಳು ಅರ್ಥ ಮಾಡಿಕೊಳ್ಳಲಿ. ಗ್ರಾಮಾಂತರ ಪ್ರದೇಶಕ್ಕೆ ನಾನು ಭೇಟಿ ನೀಡಿದ ಸಂದರ್ಭ ಅಲ್ಲಿನ ರಸ್ತೆ, ಮೂಲಭೂತ ಸೌಕರ್ಯಗಳ ಕೊರತೆಗಳನ್ನು ನೋಡಿ, ಸಮಸ್ಯೆ ಆಲಿಸಿ ಅವುಗಳ ಪರಿಹಾರಕ್ಕೆ ಶೀಘ್ರ ಕ್ರಮಕೈಗೊಂಡು ಬಗೆಹರಿಸಿದ್ದೇನೆ. ಈ ಕಾರಣಕ್ಕೆ ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತರು ಅಭಿವೃದ್ಧಿ ಕೆಲಸ ಮೆಚ್ಚಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅಲ್ಲದೇ ಮುಂಬರುವ ಚುನಾವಣೆಯಲ್ಲಿ ಜನರ ಆಶೀರ್ವಾದ ನನ್ನ ಮೇಲೆ ಇದೆ ಎಂದರು.
ಕಣಗಾಲು ಗ್ರಾಮದ ಅಭಿವೃದ್ಧಿ ಸುಮಾರು ಎರಡೂ ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಅಲ್ಲದೆ ಜನರ ಆರೋಗ್ಯದ ಕಾಳಜಿಗಾಗಿ ಆಂಬ್ಯುಲೆನ್ಸ್ ಬೇಕೆಂದು ಮನವಿ ಮಾಡಿದ್ದು, ಶೀಘ್ರವೇ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದರು.
ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ತಹಸೀಲ್ದಾರ್ ಕೆ.ಚಂದ್ರಮೌಳಿ, ಹಾರಂಗಿ ಎಇಇ ನವೀನ್‌ಕುಮಾರ್, ಜಿ.ಪಂ ಎಇಇ ಮಲ್ಲಿಕಾರ್ಜುನ್, ಮುಖಂಡರಾದ ಗಗನ್, ಹನುಮಂತು, ಮಹಾದೇವ್, ಬಸವರಾಜು, ಕುಮಾರಶೆಟ್ಟಿ, ರಂಗಸ್ವಾಮಿ, ಶ್ರೀನಿವಾಸ್, ಚಂದ್ರಪ್ಪ, ಚಂದ್ರೇಗೌಡ, ಪ್ರಕಾಶ್, ಸುಂದ್ರೇಗೌಡ, ನಾಗರಾಜು, ಪ್ರಸನ್ನ, ನಾಗಯ್ಯ, ಕಂದಾಯ ನಿರೀಕ್ಷಕ ಪ್ರದೀಪ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು

Leave a Comment

Your email address will not be published. Required fields are marked *

error: Content is protected !!
Scroll to Top