ಪಿರಿಯಾಪಟ್ಟಣ: ಸರ್ಕಾರದಿಂದ ನೀಡಲಾಗುವ ರೇಷನ್ ಕಾರ್ಡ್ ಕೇವಲ ಪಡಿತರ ಪಡೆಯಲು ಮಾತ್ರವಲ್ಲ ಆರೋಗ್ಯ ಸಂಬಂಧಿಸಿದ ಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ನೆರವಾಗಲಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದಲ್ಲಿ ಆಹಾರ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಆಯ್ದ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಿ ಅವರು ಮಾತನಾಡಿದರು, ಮುಖ್ಯಮಂತ್ರಿಗಳು ಮತ್ತು ಆಹಾರ ಇಲಾಖೆ ನಿರ್ದೇಶಕರ ಕಚೇರಿಗಳಿಗೆ ಎಡೆಬಿಡದೆ ಅಲೆದು ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ನನ್ನ ಈ ಶ್ರಮದಿಂದಾಗಿ ಇಂದು ರಾಜ್ಯಾದ್ಯಂತ 1.5 ಲಕ್ಷ ಮಂದಿಗೆ ಬಿಪಿಎಲ್ ಕಾರ್ಡ್ ನೀಡುವಂತೆ ಆದೇಶ ಬಂದಿದೆ, ಕ್ಷೇತ್ರದ ಜನರ ಬೇಡಿಕೆಗಳನ್ನು ಪೂರೈಸಲು ಸರ್ಕಾರ ವಿಳಂಬ ಮಾಡಿದರೆ ಆಗ ಸದನದಲ್ಲಿ ಧ್ವನಿ ಎತ್ತುವ ಪ್ರಯತ್ನ ಮಾಡಿದ್ದೇನೆ, ನನ್ನ ಒಡೆತನದಲ್ಲಿರುವ ಈ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಕೆಲವು ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿರುವುದು ಹಾಗೂ ಕೆಲವು ಕಾಂಗ್ರೆಸ್ ಬೆಂಬಲಿತರು ಇಲ್ಲಿಗೆ ಕಾರ್ಡ್ ಪಡೆಯಲು ಬಂದಿಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ ಯಾರಿಗೂ ಅಂಜಿಕೊಂಡು ಹೆದರಿಕೊಂಡು ತಾಲೂಕಿನ ಜನರ ಸೇವೆ ನಾನು ಮಾಡುತ್ತಿಲ್ಲ ಎಂದರು.
ಆಹಾರ ಇಲಾಖೆ ಶಿರಸ್ತೆದಾರ್ ಸಣ್ಣಸ್ವಾಮಿ ಅವರು ಮಾತನಾಡಿ ಈ ಸಾಲಿನಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು ತಾಲೂಕಿನಲ್ಲಿ 1036 ಅರ್ಜಿಗಳು ಆನ್ಲೈನ್ ನಲ್ಲಿ ಸಲ್ಲಿಕೆಯಾಗಿದ್ದು ಈವರೆಗೆ 504 ಮಂದಿ ಪಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ, ಎರಡನೇ ಹಂತದಲ್ಲಿ 380 ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತಿದ್ದು ಇನ್ನುಳಿದವರಿಗೆ ಜನವರಿ ತಿಂಗಳಿನಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಸಿಲ್ದಾರ್ ಕೆ.ಚಂದ್ರಮೌಳಿ ಅವರು ಮಾತನಾಡಿ ಬಡತನ ರೇಖೆಗಿಂತ ಕೆಳಗಿರುವ ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಯೋಜನೆ ತಲುಪುವಂತಾಗಬೇಕು ಬಿಪಿಎಲ್ ಕಾರ್ಡ್ ದುರುಪಯೋಗವಾಗುವುದು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಪುರಸಭೆ ಅಧ್ಯಕ್ಷ ಕೆ.ಮಹೇಶ್, ಉಪಾಧ್ಯಕ್ಷೆ ಪಿ.ಕೆ ಆಶಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ.ಕೃಷ್ಣ, ಸದಸ್ಯರಾದ ಭಾರತಿ, ಪುಷ್ಪಲತಾ, ನಿರಂಜನ್, ಪ್ರಕಾಶ್ ಸಿಂಗ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ ಸ್ಥಳೀಯ ಜನಪ್ರತಿನಿಧಿಗಳು ಮುಖಂಡರು ಇದ್ದರು.
ವಿವಿಧೆಡೆ ಕಾಮಗಾರಿಗಳಿಗೆ ಚಾಲನೆ: ಕಿರನಲ್ಲಿ ಗ್ರಾಮದಲ್ಲಿ 10 ಲಕ್ಷ, ತಿಮಕಾಪುರ ಗ್ರಾಮದಲ್ಲಿ 20 ಲಕ್ಷ, ಚೌತಿ ಗ್ರಾಮದಲ್ಲಿ 33 ಲಕ್ಷ, ಮಲ್ಲೇಗೌಡನ ಕೊಪ್ಪಲು ಗ್ರಾಮದಲ್ಲಿ 15 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಚೌಡೇನಹಳ್ಳಿ ಗ್ರಾಮದಲ್ಲಿ 15 ಲಕ್ಷ ವೆಚ್ಚದ ಹೆಚ್ಚುವರಿ ಶಾಲಾ ಕೊಠಡಿ ನಿರ್ಮಾಣ ಮತ್ತು ಮಲ್ಲೇಗೌಡನ ಕೊಪ್ಪಲು ಗ್ರಾಮದಲ್ಲಿ 72 ಲಕ್ಷ ವೆಚ್ಚದಲ್ಲಿ ಜೆಜೆಎಂ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಮತ್ತು ಮೇಲ್ತೊಟ್ಟಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು