ಪಿರಿಯಾಪಟ್ಟಣ: ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ನಡೆದ ಜೆಡಿಎಸ್ ಪಕ್ಷದ ಗ್ರಾ.ಪಂ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು.

ಸಭೆ ಉದ್ಘಾಟಿಸಿ ಶಾಸಕ ಕೆ.ಮಹದೇವ್ ಅವರು ಮಾತನಾಡಿ ರಾಜ್ಯದ ಮತದಾರರು ಪ್ರಾದೇಶಿಕ ಪಕ್ಷ ಜೆಡಿಎಸ್ ನತ್ತ ಒಲವು ತೋರುತ್ತಿದ್ದು ಮುಂಬರುವ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ, ನನ್ನ ಅಧಿಕಾರವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಕಾಂಗ್ರೆಸ್ ಪಕ್ಷದ ವಿರೋಧಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು ತಮ್ಮ ಗ್ರಾಮಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಇತರ ಮತದಾರರಿಗೆ ಅರಿವು ಮೂಡಿಸಬೇಕಿದೆ, ಚುನಾವಣೆ ಸಮೀಪಿಸುತ್ತಿದ್ದು ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿ ಮತ್ತೊಮ್ಮೆ ತಾಲೂಕಿನಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಗಮನಹರಿಸುವಂತೆ ತಿಳಿಸಿದರು.

ಮೈಮೂಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರು ಮಾತನಾಡಿ ಮಾಜಿ ಶಾಸಕ ಕೆ.ವೆಂಕಟೇಶ್ ಅವರು ಇದು ನನ್ನ ಕೊನೆ ಚುನಾವಣೆ ಎಂದು ಇನ್ನೂ ಅಧಿಕಾರದ ಆಸೆ ಬಿಡದೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ, ಕಾರ್ಯಕರ್ತರನ್ನು ಎತ್ತಿ ಕಟ್ಟಿ ದ್ವೇಷದ ರಾಜಕಾರಣ ಮಾಡುವ ಬದಲು ನೇರವಾಗಿ ಚರ್ಚೆಗೆ ಬನ್ನಿ, ಜೆಡಿಎಸ್ ಪಕ್ಷ ರೈತರ ಕಾರ್ಮಿಕರ ಹಾಗೂ ಸಮಾಜದಲ್ಲಿನ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ, ಮೈಮುಲ್ ನಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ತಾಲೂಕಿಗೆ ತಂದಿದ್ದು ಹೈನುಗಾರಿಕೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಹಿರಿಯ ವಕೀಲರಾದ ಗೋವಿಂದೇಗೌಡ, ಮುಖಂಡ ಶಿವರಾಜ್, ಮಂಜುನಾಥ್  ಮಾತನಾಡಿದರು, ಗ್ರಾಮಕ್ಕೆ ಆಗಮಿಸಿದ ಶಾಸಕರು ಹಾಗೂ ಮುಖಂಡರನ್ನು ಡೊಳ್ಳು ಹಾಗೂ ಮಂಗಳವಾದ್ಯದ ಮುಖಾಂತರ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಜೈಕಾರ ಕೂಗಿ ಹೂವಿನ ಮಳೆ ಸುರಿಸಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು, ಇದಕ್ಕೂ ಮುನ್ನ ಗ್ರಾಮದಲ್ಲಿ 1.6 ಕೋಟಿ ವೆಚ್ಚದ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಶಾಸಕ ಕೆ.ಮಹದೇವ್ ಅವರು ಚಾಲನೆ ನೀಡಿದರು.

ಈ ಸಂದರ್ಭ ಕೋಮಲಾಪುರ ಗ್ರಾ.ಪಂ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಪಾಪೇಗೌಡ, ಸದಸ್ಯರಾದ ಅಶೋಕ್, ಪದ್ಮಮ್ಮ, ಗಣೇಶ್ ಸೇರಿದಂತೆ ಜೆಡಿಎಸ್ ಬೆಂಬಲಿತ ಸದಸ್ಯರು, ಮುಖಂಡರಾದ ಗಗನ್, ಸೋಮೇಗೌಡ, ಪ್ರೇಮ್ ಕುಮಾರ್, ನಿಂಗೇಗೌಡ, ರಘುನಾಥ್, ವಿದ್ಯಾಶಂಕರ್, ಈರೇಗೌಡ, ಕುಮಾರ್, ರಾಜಶೆಟ್ಟಿ, ಆನಂದ್, ಚಂದ್ರ, ಕಿರಣ್ ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top