ಪಿರಿಯಾಪಟ್ಟಣ: ಅಮರಶಿಲ್ಪಿ ಜಕಣಾಚಾರಿ ತಮ್ಮ ವೈಯಕ್ತಿಕ ಜೀವನ ತ್ಯಾಗ ಮಾಡಿದ ಫಲವಾಗಿ ಜಗತ್ಪ್ರಸಿದ್ಧ ಸುಂದರ ದೇವಾಲಯಗಳನ್ನು ನಿರ್ಮಿಸಲು ಸಾಧ್ಯವಾಯಿತು ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಜಕಣಾಚಾರಿ ಅವರು ಕೆತ್ತಿರುವ ಅಪರೂಪದ ಕಲಾಕೃತಿಗಳು ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ, ಅವರ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿ ಆಗಬೇಕಾಗಿದೆ, ಅವರು ಹುಟ್ಟಿದ ಕರ್ನಾಟಕದಲ್ಲಿಯೆ ನೆಲೆಸಿ ಅಲ್ಲೇ ಜೀವನ ಅಂತ್ಯ ಕಂಡಿದ್ದು ನಮ್ಮೆಲ್ಲರ ಭಾಗ್ಯವೇ ಸರಿ,
ವಿಶ್ವಕರ್ಮ ಜನಾಂಗದವರು ಆರ್ಥಿಕವಾಗಿ ಹಿಂದುಳಿದಿದ್ದರೂ ಶ್ರಮಜೀವಿಗಳಾಗಿದ್ದಾರೆ ಎಂದರು.
ಪ್ರಧಾನ ಭಾಷಣಕಾರ ಹಿರಣ್ಣಯ್ಯ ಅವರು ಮಾತನಾಡಿ ಮಹಾನ್ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಭಾರತೀಯ ಕಲೆ ಸಂಸ್ಕೃತಿಯ ಪ್ರತೀಕವಾಗಿರುವ ದೇಶದ ಹಲವು ದೇವಾಲಯಗಳನ್ನು ನಿರ್ಮಿಸಿ ಕಲೆಯ ವೈಭವವನ್ನು ಎತ್ತಿ ಹಿಡಿದಿದ್ದಾರೆ, ರಾಜ್ಯದಲ್ಲಿ ಜನಿಸಿದ್ದರೂ ಆರ್ಥಿಕ ಮುಗ್ಗಟ್ಟಿನಿಂದಾಗಿ ಮತ್ತು ಶಿಲ್ಪಕಲೆಯಲ್ಲಿ ಪರಿಣಿತಿ ಹೊಂದಲು ಸಂಸಾರವನ್ನು ತೊರೆದು ತಂಜಾವೂರಿಗೆ ತೆರಳಿ ತಮಿಳುನಾಡಿನಲ್ಲೂ ಅದ್ಭುತವಾದ ದೇವಾಲಯಗಳನ್ನು ನಿರ್ಮಿಸಿದ್ದರು, ಮತ್ತೆ ರಾಜ್ಯಕ್ಕೆ ಮರಳಿ ಬೇಲೂರು ಹಳೇಬೀಡಿನಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯ ನಿರ್ಮಿಸಿ ಶಿಲ್ಪಕಲಾ ಕ್ಷೇತ್ರದಲ್ಲಿ ಅಜರಾಮರಾಗಿದ್ದಾರೆ, ದೇವಾಲಯದ ಒಂದೇ ಪ್ರಾಂಗಣದಲ್ಲಿ ಒಂದೇ ಹೆಸರಿನ ಎರಡು ದೇವರ ಮೂರ್ತಿಗಳನ್ನು ಸೂಚಿಸುವ ಮೂಲಕ ಇತಿಹಾಸ ನಿರ್ಮಿಸಿರುವ ಜಕಣಾಚಾರಿ ಅವರ ಪುತ್ರ ಡಕಣಾಚಾರಿ ಸಹ ಅವರಷ್ಟೇ ಅದ್ಭುತ ಶಿಲ್ಪಕಲಾವಿದರಾಗಿದ್ದರು,
ಸಮಾಜದಲ್ಲಿ ಅತ್ಯಂತ ಹಿಂದುಳಿದವರಾಗಿರುವ ವಿಶ್ವಕರ್ಮ ಜನಾಂಗ ರಾಜಕೀಯ ಪ್ರಾತಿನಿಧ್ಯ ಹೊಂದಿಲ್ಲದ ಕಾರಣದಿಂದ ಜನಾಂಗಕ್ಕೆ ಸಿಗಬೇಕಾದ ಅವಕಾಶದಿಂದ ವಂಚಿತರಾಗಿದ್ದೇವೆ, ಹೋರಾಟದ ಹಾದಿ ಹಿಡಿದು ಮೀಸಲಾತಿ ಹೆಚ್ಚಳ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದರು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಮಹೇಶ್ ಆಚಾರ್ಯ ಅವರು ಮಾತನಾಡಿ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಿಸಲು ಮತ್ತು ಪತ್ರಿಕೆ ವಿತರಣೆ ಮಾಡುತ್ತಿದ್ದ ಜನಾಂಗದ ಕಾಂತರಾಜ್ ಅನಾರೋಗ್ಯದಿಂದ ಕಾಲು ಕಳೆದುಕೊಂಡಿದ್ದು ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು.
ಈ ಸಂದರ್ಭ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಬಿಇಓ ಬಸವರಾಜ್, ಜಿ.ಪಂ ಎಇಇ ಮಲ್ಲಿಕಾರ್ಜುನ್, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಸಿಡಿಪಿಓ ಮಮತಾ, ವಿಶ್ವಕರ್ಮ ಜನಾಂಗದ ತಾಲೂಕು ಉಪಾಧ್ಯಕ್ಷ ತಿರುನೀಲಕಂಠ, ಮುಖಂಡರಾದ ಚಂದ್ರು, ನಿರಂಜನ್, ಎಸ್.ರಾಮು, ಲೋಕಪಾಲಯ್ಯ, ಸಿದ್ದೇಗೌಡ, ಎ.ಟಿ.ರಂಗಸ್ವಾಮಿ, ಶಿರಸ್ತೇದಾರ್ ಗಳಾದ ಟ್ರಿಜಾ, ನಂದಕುಮಾರ್ ಸೇರಿದಂತೆ ವಿಶ್ವಕರ್ಮ ಜನಾಂಗದ ಮುಖಂಡರು ಹಾಜರಿದ್ದರು.