ರೈತರ ಪರ ಆಡಳಿತ ನಡೆಸುವ ಸರಕಾರಗಳು ರಚನೆಯಾದಾಗ ಮಾತ್ರ ರೈತರ ಸ್ವಾವಲಂಬಿಗಳಾಗಲು ಸಾದ್ಯವಾಗುತ್ತದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಿರಿಯಾಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸೂಪರ್ಸ್ಟಾರ್ ರೈತ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸರಕಾರದ ಸವಲತ್ತುಗಳು ಸಾಮಾನ್ಯ ರೈತರಿಗೂ ತಲುಪುವಂತಾಗಬೇಕು, ಕೃಷಿ ಇಲಾಖೆಯೂ ರೈತರಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗುತಿದೆ. ಇಲಾಖೆಗಳು ಗುಣಮಟ್ಟದ ಕೆಲಸ ನಿರ್ವಹಣೆ ಮಾಡಿದಾಗ ಸಣ್ಣರೈತರ ಬೆಳವಣಿಗೆಗೆ ಸಹಕಾರ ನೀಡಬಹುದಾಗಿದೆ. ತಾಲೂಕಿನಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದರಿಂದ ನನಗೆ ಹೆಚ್ಚಿನ ನೋವು ಉಂಟಾಗಿದೆ ಸಂಕಷ್ಟದ ಸಮಯದಲ್ಲಿ ಎಲ್ಲರೂ ಜೊತೆಗೂಡಿ ರೈತರ ಏಳಿಗೆಗೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ವಿಜಯಕರ್ನಾಟಕ ಪತ್ರಿಕೆ ರೈತರಲ್ಲಿ ಆತ್ಮಸೈರ್ಯ ತುಂಬುವ ಉದ್ದೇಶದಿಂದ ಸೂಪರ್ಸ್ಟಾರ್ ರೈತ ಪ್ರಶಸ್ತಿ ನೀಡಿ ರೈತರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಕೇವಲ ಜಾಹಿರಾತಿಗಾಗಿ ಸೀಮಿತವಾಗಿದೆ ಆದರೆ ವಿಜಯಕರ್ನಾಟಕ ಪತ್ರಿಕೆ ಅದರ ಆಚೆಗೆ ತೆರಳಿ ಸಾಮಾಜಿಕ ಕಳಕಳಿಯಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಇತರ ಪತ್ರಿಕೆಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಮಾತನಾಡಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ತಾಲೂಕು ಕೇಂದ್ರಗಳಲ್ಲಿ ಆಯೋಜಿಸಿ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಆಹಾರ ಭದ್ರತೆಯನ್ನು ನೀಡುವುದರ ಮೂಲಕ ದೇಶವನ್ನು ಸ್ವಾವಲಂಭಿಯಾಗಿಸುವ ಮೂಲಕ ದೇಶದ ಅಭಿವೃದ್ದಿಯ ವಿಚಾರದಲ್ಲಿ ಕೃಷಿ ವಲಯ ಮತ್ತು ರೈತರು ಪ್ರಮುಖ ಪಾತ್ರವಹಿಸಿದೆ. ಸರಕಾರದ ಸವಲತ್ತುಗಳನ್ನು ಪಡೆಯಬೇಕಾದರೆ ರೈತರು ಈಕೆವೈಎಸ್ಸಿ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಮೈಮೂಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ ಕಚ್ಚಾ ಪದಾರ್ಥಗಳ ದರ ಹೆಚ್ಚಾಗುತ್ತಿದ್ದು ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗಧಿ ಮಾಡಿದರೆ ಮಾತ್ರ ರೈತರು ಜೀವನ ನಡೆಸಲು ಸಾಧ್ಯವಾಗುತ್ತದೆ. ರೈತರು ವ್ಯವಸಾಯಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಲು ಅಗತ್ಯ ಸೌಲಭ್ಯಗಳನ್ನು ಸರಕಾರ ನೀಡಲು ಮುಂದಾಗಬೇಕು. ಕೃಷಿ ಇಲಾಖೆಯ ಅನೇಕ ಸೌಲಭ್ಯಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು, ರೈತರು ಕೇವಲ ಕೃಷಿಗೆ ಜೋತು ಬೀಳದೆ ಹೈನುಗಾರಿಕೆಯನ್ನು ಅವಲಂಬಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ತಿಳಿಸಿದರು.
ತಾಲೂಕಿನ ರೈತರು ಎಷ್ಟೆ ಪ್ರಮಾಣದ ಹಾಲು ಉತ್ಪಾದನೆ ಮಾಡಿದರು ಮಂಡಳಿಯೂ ಖರೀದಿ ಮಾಡಲು ಸಿದ್ದವಿದೆ. ಕೇವಲ ಸರಕಾರಗಳೂ ಆಶ್ವಾಸನೆಗಳನ್ನು ನೀಡಿದರೆ ರೈತರು ಉಳಿಯಲು ಸಾಧ್ಯವಿಲ್ಲ ಬದಲಾಗಿ ರೈತರನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಉಪ ಕೃಷಿನಿರ್ದೇಶಕ ಡಾ.ಯೋಗೇಶ್ ಜಿ.ಎಚ್ ಕಾರ್ಯಕ್ರಮದಲ್ಲಿ ರೈತ ಉತ್ಪಾದಕ ಸಂಸ್ಥೆಯನ್ನು ಲಾಭದಾಯಕವಾಗಿ ಮುನ್ನಡೆಸುವುದು ಹೇಗೆ ಎಂಬುದರ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು. ರೈತರು ತಮ್ಮ ಬೆಳೆಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವ ಕೆಲಸವನ್ನು ಮಾಡಬೇಕು ಆಗ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶ್ರೀಕ್ಷೇತ ಧರ್ಮಸ್ಥಳ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ ಪ್ರಾಕೃತಿಕ ವಿಕೋಪಗಳಿಂದ ರೈತರ ಬದುಕು ಅತಂತ್ರವಾಗುತ್ತಿದೆ. ರೈತರು ಸ್ವಾವಲಂಬಿಗಳಾಗಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದ್ದು ರೈತರನ್ನು ಸ್ವಾವಲಂಭಿಗೊಲಿಸುವ ನಿಟ್ಟಿಲ್ಲಿ ಕಳೆದ ನಲವತ್ತ ವರ್ಷಗಳಿಂದ ಕೂಲಿಗಾಗಿ ಕಾಳು ಎಂಬ ಯೋಜನೆಯ ಮುಖಾಂತರ ರೈತರಿಗೆ ಮಾಹಿತಿ ನೀಡುತ್ತಿದೆ. ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಇಂತಹ ವೇದಿಕೆಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.
ವಿಜಯಕನಾಟಕ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ರಮೇಶ್ಉತ್ತಪ್ಪ ಮಾತನಾಡಿ ಕೋವಿಡ್ನಂತಹ ಸಂದರ್ಭದಲ್ಲಿ ರೈತರು ಮಾತ್ರ ತಮ್ಮ ದಿನನಿತ್ಯದ ಕಾರ್ಯಗಳನ್ನು ಮಾಡಿ ಬೆಳೆಬೆಳೆದು ಜನರಿಗೆ ಹಸಿವನ್ನು ನೀಗಿಸಿದರು. ವ್ಯವಸಾಯದಿಂದ ದೂರು ಉಳಿದ ಅನೇಕ ಮಂದಿ ವಾಪಸ್ಸು ಕೃಷಿಗೆ ಆಗಮಿಸಿದರು. ಯುವ ಪೀಳಿಗೆ ಕೃಷಿಯಿಂದ ದೂರವಾಗುತ್ತಿರುವ ಸಂದರ್ಭದಲ್ಲಿ ಸೂಪರ್ಸ್ಟಾರ್ ರೈತರ ಕಾರ್ಯಕ್ರಮ ರೈತರಲ್ಲಿ ಆತ್ಮಸೈರ್ಯ ತುಂಬುವ ಮತ್ತು ಇತರ ರೈತರಿಗೆ ಮಾದರಿ ರೈತರನ್ನು ಪರಿಚಯಿಸಿ ವ್ಯವಸಾಯದ ಮೂಲಕವು ಗೌರವಯುವ ಜೀವನ ನಿರ್ವಹಣೆ ಸಾಧ್ಯ ಎಂಬುದನ್ನು ತೋರಿಸಿಕೊಡುವುದಕ್ಕಾಗಿಯೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಮೂಲ್ ನಿರ್ದೇಶಕ ಎಚ್.ಡಿ.ರಾಜೇಂದ್ರ, ಪುರಸಭೆ ಅಧ್ಯಕ್ಷ ಕೆ.ಮಹೇಶ್, ದಂಡಾಧಿಕಾರಿ ಯದುಗಿರೀಶ್, ತಾ.ಪಂ.ಕೃಷ್ಣಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಭಾರತಿ, ಟಿಎಚ್ಒ ಡಾ.ಶರತ್ಬಾಬು, ಡಾ.ಯೋಗೇಶ್, ಉಷಾ, ಧರ್ಮಸ್ಥಳ ಯೋಜನೆ ಯೋಜನಾಧಿಕಾರಿ ಸುರೇಶ್ಶೆಟ್ಟಿ, ತಾ.ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಪಿ.ಸಿ.ಕೃಷ್ಣಾ, ಸದಸ್ಯ ನಿರಂಜನ್, ಪ್ರಕಾಶ್ಸಿಂಗ್, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜೇಗೌಡ, ತಾ.ಅಧ್ಯಕ್ಷ ಜಯರಾಂ, ಓಡಿಪಿ ಎಫ್ಪಿಒ ಮಹಿಳಾ ಅಧ್ಯಕ್ಷ ರೇಣುಕಾ, ತಂಬಾಕು ಮಂಡಳಿ ಅಧೀಕ್ಷಕ ವಿಜಯ್ಕುಮಾರ್, ತಾ.ಪಂ.ಮಾಜಿ ಸದಸ್ಯರಾದ ಸೋಮಶೇಖರ್, ಎ.ಟಿ.ರಂಗಸ್ವಾಮಿ, ರಘುನಾಥ್, ಧರ್ಮಸ್ಥಳ ಸಂಘದ ಕೃಷಿ ಅಧಿಕಾರಿ ಹರೀಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.