ಪಿರಿಯಾಪಟ್ಟಣ: ಮತದಾರರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬರದ ಹಾಗೆ ಅವರು ನೀಡುವ ಸಮಸ್ಯೆಗಳ ಅರ್ಜಿಗಳನ್ನು ಆದ್ಯತೆಗೆ ಅನುಗುಣವಾಗಿ ಹಂತ ಹಂತವಾಗಿ ಬಗೆಹರಿಸುತ್ತಿದ್ದೇನೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ತಾಲೂಕಿನ ಗುರುವಯ್ಯನ ಕೊಪ್ಪಲು ಗ್ರಾಮದಲ್ಲಿ 25.68 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಗ್ರಾಮಾಂತರ ಪ್ರದೇಶಗಳ ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಅವಶ್ಯಕತೆ ಇರುವ ರಸ್ತೆ ಚರಂಡಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿದ ತೃಪ್ತಿಯಿದೆ, ಮತದಾರರು ನನ್ನ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮುಂಬರುವ ಚುನಾವಣೆಯಲ್ಲಿಯೂ ಬೆಂಬಲಿಸಿ ಆಶೀರ್ವದಿಸುವಂತೆ ಕೋರಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಅವರು ಮಾತನಾಡಿ ಮೊದಲ ಬಾರಿಗೆ ಶಾಸಕರಾದರು ತಾಲೂಕಿನ ಸಮಸ್ಯೆಗಳನ್ನು ಮನಗಂಡು ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿರುವ ಶಾಸಕ ಮಹದೇವ್ ಅವರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮನವಿ ಮಾಡಿದರು.
ಈ ವೇಳೆ ಪೂಜಾರಯ್ಯನ ಕೊಪ್ಪಲು, ಬೆಟ್ಟೇಗೌಡನ ಕೊಪ್ಪಲು ಹಾಗೂ ಕೆಲ್ಲೂರು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಯುವ ಮುಖಂಡ ಗಗನ್, ಗ್ರಾ.ಪಂ ಸದಸ್ಯ ದಿನೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸತೀಶ್, ಮುಖಂಡರಾದ ಜಿ.ಸಿ ಮಹದೇವಶೆಟ್ಟಿ, ಅಶ್ವತ್, ಮಿಲ್ಟ್ರಿ ಸೋಮಣ್ಣ, ಜಗದೀಶ್, ವೆಂಕಟೇಶ್, ಹರೀಶ್, ಹಾರಂಗಿ ಇಲಾಖೆ ಕಿತ್ತೂರು ವಿಭಾಗ ಎಇಇ ರಂಗಯ್ಯ, ಎಇ ಮಂಜುನಾಥ್, ಬೆಟ್ಟದಪುರ ವಿಭಾಗ ಎಇಇ ಲೋಹಿತ್, ಎಇ ಸುಧೀಂದ್ರ ಮತ್ತಿತರಿದ್ದರು.