ಬೆಟ್ಟದಪುರ: ವಾಣಿಜ್ಯ ಕೇಂದ್ರ ಎಂದೇ ಬಿಂಬಿತವಾಗಿರುವ ಬೆಟ್ಟದಪುರ ಗ್ರಾಮವನ್ನು ಪ್ರವಾಸಿ ತಾಣ ಮಾಡಲು ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾನು ಸಿದ್ಧನಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಗ್ರಾಮದಲ್ಲಿ ಸೋಮವಾರ ಸುಮಾರು ₹ 70 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು ಗ್ರಾಮದ ಪ್ರತಿ ರಸ್ತೆಯು ಸಹ ಕಾಂಕ್ರೀಟ್ ರಸ್ತೆಯಾಗಿ ಮಾಡಲು ಕ್ರಮ ಕೈಗೊಂಡಿದ್ದೇನೆ, ಈಗಾಗಲೇ ರಥೋತ್ಸವ ನಡೆಯುವ ರಥ ಬೀದಿಗೆ ಸುಮಾರು ₹ 3 ಕೋಟಿ ರೂಗಳ ಅನುದಾನದಲ್ಲಿ ನೀಡಿ, ಗುಣಮಟ್ಟದ ಸಿಸಿ ರಸ್ತೆ ಮಾಡಿಸಿದ್ದೇನೆ, ಅದರಂತೆ ಬೆಟ್ಟದ ತಪ್ಪಲಿನವರೆಗೂ ಡಾಂಬರೀಕರಣ ಮಾಡಿಸಲಾಗಿದೆ, ಮುಂದಿನ ದಿನಗಳಲ್ಲಿ ಪ್ರವಾಸಿ ತಾಣ ಮಾಡಲು ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಬೆಟ್ಟದಪುರ ಗ್ರಾಮವು ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಮಾಡುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ, ಮುಂಬರುವ ಚುನಾವಣೆಯ ಬಳಿಕ ನನ್ನ ಮೊದಲ ಆದ್ಯತೆ ಬೆಟ್ಟದಪುರವನ್ನು ಪಟ್ಟಣ ಪಂಚಾಯಿತಿ ಮಾಡುವುದು ಹಾಗೂ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ಉಪಾಧ್ಯಕ್ಷ ಸೌಮ್ಯ, ಮುಖಂಡರಾದ ರಾಜಶೇಖರ್, ಅಯ್ಯರ್ ಗಿರಿ, ಮಲ್ಲಿಕಾರ್ಜುನ, ಉದಯ್ ಕುಮಾರ್, ಲೋಕೇಶ್, ಸ್ವಾಮಿಗೌಡ, ಪಟೇಲ್ ನಟೇಶ್ , ಚಂದ್ರು, ಹರೀಶ್, ಸೈಯದ್ ಹಸೀಬ್ , ಕುಮಾರ್ ಇದ್ದರು.
ಬೆಟ್ಟದಪುರ ಗ್ರಾಮದಲ್ಲಿ ಸೋಮವಾರ ₹ 70 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ. ಮಹದೇವ್ ಭೂಮಿ ಪೂಜೆ ನೆರವೇರಿಸಿದರು. ಮಂಜುಳಾ,ಸೌಮ್ಯ, ರಾಜಶೇಖರ್,ದೇವರಾಜು, ಅಯ್ಯರ್ ಗಿರಿ ಇದ್ದರು.