ಕೊಣಸೂರು ಗ್ರಾಮವು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಶಾಸಕ ಕೆ.ಮಹದೇವ್ ಮನವಿ ಮಾಡಿದರು.

ಸಮೀಪದ ಭುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಣಸೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ವಿಧಾನಸಭೆ ಚುನಾವಣೆ ಆರು ತಿಂಗಳು ಮುಂಚೆಯೇ ನಮ್ಮ ತಾಲ್ಲೂಕಿನಲ್ಲಿ ಚುನಾವಣೆಯ ಅಬ್ಬರ ಹೆಚ್ಚಾಗಿದೆ, ಕಳೆದ ನಾಲ್ಕೂವರೆ ವರ್ಷದಿಂದ ತಾಲ್ಲೂಕಿನ ಕಡೆಗೆ ತಲೆ ಹಾಕದಿದ್ದ ಮಾಜಿ ಶಾಸಕರು ಈಗ ರಾತ್ರಿ ಸಮಯದಲ್ಲಿ ನಮ್ಮ ಕಾರ್ಯಕರ್ತರಿಗೆ ಮನೆ ಮನೆಗೆ ಹೋಗಿ ಹಣ ಹಂಚಲು ಮುಂದಾಗಿದ್ದಾರೆ, ನಿಷ್ಠಾವಂತ ಕಾರ್ಯಕರ್ತರು ಇದಕ್ಕೆ ಒಪ್ಪದ ಸಮಯದಲ್ಲಿ ನಮ್ಮ ಮೇಲೆ ಅಪಪ್ರಚಾರ ಮಾಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ನೀವು ಚುನಾವಣೆಗೆ ಬರುವುದಾದರೆ ನಿಮ್ಮ ಮುಂದಿನ ಯೋಜನೆಗಳನ್ನು ಜನರ ಬಳಿ ಹೇಳಿ, ಮತದಾರರು ಕೈ ಹಿಡಿದರೆ ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ, ಅದು ಬಿಟ್ಟು ಇಲ್ಲಸಲ್ಲದ ಆರೋಪಗಳನ್ನು ಮಾಡಬೇಡಿ ಎಂದು ಸಲಹೆ ನೀಡಿದರು.

 ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಮಾತನಾಡಿ ತಾಲ್ಲೂಕಿನಲ್ಲಿ ಒಮ್ಮತದಿಂದ ದುಡಿದಾಗ ಮಾತ್ರ ಜೆಡಿಎಸ್ ಪಕ್ಷವನ್ನು ಗೆಲ್ಲಿಸಲು ಸಾಧ್ಯ, ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದೆ, ಮಹದೇವ್ ಅಣ್ಣನವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದೆ ಇಟ್ಟು ಮತ ಪಡೆಯಬೇಕು, ನಾವು ಅಧಿಕಾರಕ್ಕೆ ಬಂದಾಗಿನಿಂದ ಮಾಡಿರುವ ಅಭಿವೃದ್ಧಿ ಕೆಲಸಗಳ ಸಂಪೂರ್ಣ ಅಂಕಿ ಅಂಶಗಳನ್ನು ನಾವು ನೀಡಲು ಸಿದ್ಧರಿದ್ದೇವೆ, ನೀವು ಕಳೆದ 25 ವರ್ಷಗಳಿಂದ ಮಾಡಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಲು
 ಸಿದ್ದರಿದ್ದೀರಾ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ರವರಿಗೆ ಸವಾಲೇಸಿದರು. ರಾಜ್ಯಕ್ಕೆ ಕುಮಾರಣ್ಣ, ತಾಲ್ಲೂಕಿಗೆ ಮಾದೇವಣ್ಣ ಎಂಬ ಶೀರ್ಷಿಕೆ ಅಡಿಯಲ್ಲಿ ಈ ಬಾರಿ ಚುನಾವಣೆ ನಡೆಸಬೇಕೆಂದು ತಿಳಿಸಿದರು.

 ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ ಮಾತನಾಡಿ ಕಳೆದ 20 ವರ್ಷಗಳಿಂದ ನಾನು ಮತ್ತು ಮಹದೇವರವರು ಜೆಡಿಎಸ್ ಪಕ್ಷವನ್ನು ಸಂಘಟಿಸಿ ಬಲಪಡಿಸುತ್ತಾ ಬಂದಿದ್ದೇವೆ, ಜನತೆಯ ಆಶೀರ್ವಾದದಿಂದ ಈ ಬಾರಿ ಅಧಿಕಾರಕ್ಕೆ ಬಂದು ಸರಿಸುಮಾರು ₹ 1 ಸಾವಿರ ಕೋಟಿ ರೂಗಳಿಗೂ ಹೆಚ್ಚು ಅನುದಾನ ತಂದು ತಾಲ್ಲೂಕಿನ ಅಭಿವೃದ್ಧಿ ಪಡಿಸಿದ್ದಾರೆ, ಮುಂಬರುವ ಚುನಾವಣೆಯಲ್ಲಿ ಮತ್ತೊಂದು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

 ಭುವನಹಳ್ಳಿ ಟೋಲ್ ಗೇಟ್ ನಿಂದ, ಬೆಕ್ಕರೆ,ಕೊಣಸೂರು ಮಾರ್ಗವಾಗಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು.
 ಸಭೆಯ ಕಾರ್ಯಕ್ರಮದಲ್ಲಿ ನೂರಾರು ಮಂದಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

 ಮುಖಂಡರಾದ, ಶಿವಪ್ಪ, ರಘುನಾಥ್, ವಿದ್ಯಾಶಂಕರ್, ಬಿ.ವಿ ಗಿರೀಶ್, ಗಗನ್, ರವಿ,ಐಲಾಪುರ ರಾಮು, ಮೋಹನ್, ರಘುನಾಥ್, ಕರಡಿಪುರ ಕುಮಾರ್, ಮಮತಾ, ದೀಪುಗಿರೀಶ್, ಶ್ರೀನಿವಾಸ್ , ದೇವರಾಜು, ಮೈಲಾರಪ್ಪ, ಕುಮಾರ್, ಈಚೂರು ಶ್ರೀನಿವಾಸ್, ರಮೇಶ್,ಗಣೇಶ್, ಶಿವಕುಮಾರಸ್ವಾಮಿ, ಮಹೇಶ್, ನಾಗೇಂದ್ರ, ಕಾಂತರಾಜು,ಹೊನ್ನೇಗೌಡ,ಜಯಣ್ಣ ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top