ಪಿರಿಯಾಪಟ್ಟಣ : ಕಿತ್ತೂರು ಗ್ರಾಮದಲ್ಲಿ ಗುರುವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಸ್ವೀಕರಿಸಿದ 60 ಅರ್ಜಿಗಳನ್ನು ಪರಿಶೀಲಿಸಿ ಒಂದೊಂದಾಗಿ ಓದಿ ಸಂಬಂಧಪಟ್ಟ ಅಧಿಕಾರಿಗಳನ್ನು ಶಾಸಕ ಕೆ.ಮಹದೇವ್ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಬಳಿಕ ಮಾತನಾಡಿದ ಅವರು ರೈತರ ಸಂಕಷ್ಟಗಳನ್ನು ಅರಿತು ಅಧಿಕಾರಿಗಳು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಅಲೆದಾಡಿಸದೆ ಕೆಲಸ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು, ಬಂದಿರುವ ಸಮಸ್ಯೆ ಅರ್ಜಿಗಳು ಒಂದೆರಡು ದಿನಗಳಲ್ಲಿ ಆ ಸಮಸ್ಯೆಗಳು ಬಗೆಹರಿಯ ಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಸಾರ್ವಜನಿಕರು ತಾಲ್ಲೂಕಿನ ಯಾವುದೇ ಇಲಾಖೆಗಳಿಗೆ ಅರ್ಜಿ ಕೊಟ್ಟು ನಿಮ್ಮ ಸಮಸ್ಯೆ ಬಗೆಹರಿಯದಿದ್ದರೆ, ಅಥವಾ ಅಧಿಕಾರಗಳು ಸ್ಪಂದಿಸದ ವೇಳೆ ನೇರವಾಗಿ ನನಗೆ ಕರೆ ಮಾಡಿ ಎಂದು ತಿಳಿಸಿದರು
ತಾಲ್ಲೂಕಿನಲ್ಲಿ 200 ಕ್ಕು ಹೆಚ್ಚು ರೈತರು ಸಾಲಭಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ಅವರ ಕುಟುಂಬಗಳಿಗೆ ಸರ್ಕಾರದಿಂದ ಬರುವಂತಹ ಅನುದಾನವನ್ನು ಮುಖ್ಯಮಂತ್ರಿಗಳೊಂದಿಗೆ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ. ಅನುದಾನವನ್ನು ಬಿಡುಗಡೆ ಮಾಡಿಸಿದ್ದೇನೆ.ಒಬ್ಬ ಜನಪ್ರತಿನಿಧಿ ರೈತರ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಅರಿತುಕೊಂಡು ಕೆಲಸ ಮಾಡಿದರೆ ಮಾತ್ರ ಸಮಸ್ಯೆಗಳು ಬಗೆಹರಿಸಲು ಸಾಧ್ಯ ಎಂದರು.
ತಹಸೀಲ್ದಾರ್ ಎಂ.ಎಸ್ ಯದುಗಿರೀಶ್ ಮಾತನಾಡಿ ಬೆಟ್ಟದಪುರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸುಮಾರು 4700ಕ್ಕೂ ಹೆಚ್ಚಿನ ಕುಟುಂಬಗಳು ಪಿಂಚಣಿ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಾರ್ವಜನಿಕರು ಅರ್ಜಿ ನೀಡಬೇಕು. ಸಾರ್ವಜನಿಕರು ಕಚೇರಿಗಳನ್ನು ಅಲೆದಾಡಬಾರದು ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ತಾಲೂಕು ಪಂಚಾಯಿತಿ ಇ.ಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ಪಂಚಾಯಿತಿಯಲ್ಲಿ ರೈತರು ಸೇರಿದಂತೆ ಪ್ರತಿಯೊಬ್ಬರಿಗೂ ಅನುಕಲವಾಗುವ ಯೋಜನೆಗಳು ಸಾಕಷ್ಟಿದ್ದು, ಅವುಗಳನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು. ಹಸು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೆ ದನದ ಕೊಟ್ಟಿಗೆ ನಿರ್ಮಾಣ ಮಾಡುವುದಕ್ಕೆ ₹ 57 ಸಾವಿರ ರೂ. ಅನುದಾನವನ್ನು ನೀಡಲಾಗುತ್ತಿದ್ದು, ಇದನ್ನು ಬಳಸಿಕೊಳ್ಳಬೇಕು. ಯಾವುದೇ ಯೋಜನೆಗಳ ಸೌಲಭ್ಯವನ್ನು ಪಡೆಯುವುದಕ್ಕೆ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಿಂಚಿಣಿ ಯೋಜನೆಯ ಆದೇಶ ಪತ್ರ, ಸೇರಿದಂತೆ ವಿವಿಧ ಯೋಜನೆಗಳ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು. ಆರೋಗ್ಯ ಇಲಾಖೆವತಿಯಿಂದ ಆಯೋಜಿಸಿದ ಆರೋಗ್ಯ ಶಿಬಿರದಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಒಂದೆರಡು ದಿನದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಕಿತ್ತೂರು ಗ್ರಾ.ಪಂ ಪಿಡಿಓ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಖಡಕ್ ಸೂಚನೆ ನೀಡಿದರು.
ಕಿತ್ತೂರು ಗ್ರಾ.ಪಂ ಅಧ್ಯಕ್ಷೆ ನಳಿನಿ, ಉಪಾಧ್ಯಕ್ಷೆ ವೀಣಾ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್, ತಾಲ್ಲೂಕು ಅರೋಗ್ಯ ಅಧಿಕಾರಿ ಡಾ. ಶರತ್ ಬಾಬು, ಬಿಇಒ ಬಸವರಾಜು, ಲೋಕೋಪಯೋಗಿ ಇಲಾಖೆಯ ಎಇಇ ವೆಂಕಟೇಶ್, ಸಾರಿಗೆ ಇಲಾಖೆ ವ್ಯವಸ್ಥಾಪಕ ದರ್ಶನ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಸೋಮಯ್ಯ, ಸಿಡಿಪಿಒ ಮಮತಾ, ಉಪತಹಸೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಆನಂದ್, ಮುಖಂಡರಾದ ಕೆ.ಎಸ್ ಮಂಜುನಾಥ್, ಗಗನ್, ದಿನೇಶ್, ಸತೀಶ್, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಲೆಕ್ಕಧಿಕಾರಿಗಳು ಹಾಗೂ ಸೇರಿದಂತೆ ಹಲವರು ಇದ್ದರು.