ಬೆಟ್ಟದಪುರ : ಸಮೀಪದ ನಂದಿಪುರ ಗ್ರಾಮದಲ್ಲಿ ಸುಮಾರು ₹ 30.63 ಲಕ್ಷ ರೂಗಳ ವೆಚ್ಚದಲ್ಲಿ ಮೆಟ್ಲಿಂಗ್ ರಸ್ತೆ ಕಾಮಗಾರಿಗೆ ಶಾಸಕ ಕೆ.ಮಹದೇವ್ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಇಡೀ ರಾಜ್ಯದಲ್ಲಿಯೇ ಪಿರಿಯಾಪಟ್ಟಣ ತಾಲ್ಲೂಕಿಗೆ ಪ್ರಪ್ರಥಮವಾಗಿ “ನಮ್ಮ ಹೊಲ ನಮ್ಮ ರಸ್ತೆ” ಯೋಜನೆಯಲ್ಲಿ 55 ಕಿ.ಮೀ ರಷ್ಟು ಮೆಟ್ಲಿಂಗ್ ರಸ್ತೆ ಕಾಮಗಾರಿಗೆ ಅನುದಾನವನ್ನು ಬಿಡುಗಡೆ ಮಾಡಿಸಿದ್ದೇನೆ. ರೈತರ ಸಂಕಷ್ಟವನ್ನು ಅರಿತು ಸರ್ಕಾರಕ್ಕೆ ಒತ್ತಡ ಹಾಕಿ ಮಂಡುತನವನ್ನು ಪ್ರದರ್ಶನ ಮಾಡಿ ಅನುದಾನವನ್ನು ಬಿಡುಗಡೆ ಮಾಡಿಸಿ ಸಾಂಕೇತಿಕವಾಗಿ ಈ ಗ್ರಾಮದಲ್ಲಿ ಚಾಲನೆ ನೀಡಲಾಗಿದೆ.
ರೈತರು ಜಮೀನುಗಳಿಗೆ ಹೋಗಲು ರೈತರ ಬೇಡಿಕೆಗನುಗುಣವಾಗಿ ಈ ಅಭಿವೃದ್ಧಿಗೆ ಸಹಕಾರ ನೀಡಿದ್ದೇನೆ, ಅದರಲ್ಲಿ 1 ಕಿ.ಮೀಗೆ ಸರ್ಕಾರದಿಂದ ₹4 ಲಕ್ಷ ರೂಗಳು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ₹ 8.5 ಲಕ್ಷ ರೂಗಳು, ಒಟ್ಟು ₹ 12.5 ಲಕ್ಷ ರೂಗಳ ವೆಚ್ಚದಲ್ಲಿ ಮೆಟ್ಲಿಂಗ್ ರಸ್ತೆ ಮಾಡಲು ಅವಕಾಶವಿದೆ.
ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿರುವ 30 ಕಿ.ಮೀ ನಷ್ಟು ರಸ್ತೆಗೆ ಹಣ ಮಂಜೂರಾಗಿದೆ. ಮುಂದಿನ ದಿನದಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಈ ಹಿಂದೆ ಪ್ರತಿ ಗ್ರಾಮ ಪಂಚಾಯಿತಿಗೂ ಸರಿ ಸುಮಾರು ₹ 2 ಕೋಟಿ ರೂಗಳ ಅನುದಾನವನ್ನು ನೀಡಿ, ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗಿತ್ತು, ಈಗ ರೈತರ ಮನೆಯಿಂದ ಜಮೀನುಗಳಿಗೆ ಹೋಗಲು ಉತ್ತಮ ದಾರಿ ಮಾಡಿಸುವ ಉದ್ದೇಶದಿಂದ ಸರ್ಕಾರ ಹಂತದಲ್ಲಿ ಗುದ್ದಾಡಿ ಕೆಲಸ ಮಾಡಿದ್ದೇನೆ, ನನಗೆ ಮತ್ತೆ ಮತ ಹಾಕುವ ಮೂಲಕ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.