ಪಿರಿಯಾಪಟ್ಟಣ: ಜೆಡಿಎಸ್ ಪಕ್ಷದ ಅಭ್ಯರ್ಥಿ ಶಾಸಕ ಕೆ.ಮಹದೇವ್ ಅವರು ಪಕ್ಷದ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಮತ್ತೊಂದು ಬಾರಿ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಪೊಲೀಸ್ ಠಾಣೆ ಬಳಿಯಿಂದ ಮೈಸೂರು ಮಡಿಕೇರಿ ಹೆದ್ದಾರಿ ಮೂಲಕ ಕನ್ನಂಬಾಡಿಯಮ್ಮ ದೇವಾಲಯವರೆಗೆ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು ಈ ವೇಳೆ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಬಿಸಿಲಿನ ತಾಪ ಲೆಕ್ಕಿಸದೆ ಪಕ್ಷದ ವರಿಷ್ಠರು ಶಾಸಕ ಕೆ.ಮಹದೇವ್ ಹಾಗೂ ಮುಖಂಡರ ಪರ ಜೈಕಾರ ಕೂಗುತ್ತಾ ಪಕ್ಷದ ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿದರು, ಮಹಿಳೆಯರ ಪೂರ್ಣ ಕುಂಭ ವೀರಗಾಸೆ ಮಂಗಳವಾದ್ಯ ನಗಾರಿ ಹಾಡಿ ಜನರ ಡೊಳ್ಳುಕುಣಿತ ಮೆರವಣಿಗೆಗೆ ರಂಗು ತಂದಿತ್ತು, ಇದಕ್ಕೂ ಮೊದಲು ಪಟ್ಟಣದ ವಿವಿಧ ದೇವಾಲಯಗಳಿಗೆ ಶಾಸಕ ಕೆ.ಮಹದೇವ್ ಪತ್ನಿ ಸುಭದ್ರಮ್ಮ ಪುತ್ರ ಮೈಮೂಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಹಾಗೂ ಪಿ.ಎಂ ಉಮೇಶ್ ಅವರೊಂದಿಗೆ ತೆರಳಿ ಪೂಜೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಶಾಸಕ ಕೆ.ಮಹದೇವ್ ಅವರು ಮಾತನಾಡಿ ಮೊದಲ ಬಾರಿಗೆ ಶಾಸಕನಾದ ಅವಧಿಯಲ್ಲಿ ತಾಲೂಕಿನಾದ್ಯಂತ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮತದಾರರ ಮುಂದಿಟ್ಟು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದ್ದೇನೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ರಾಜಕಾರಣದಿಂದ ಶಾಸಕನಾಗಿದ್ದೇನೆ ಎಂಬ ಮಾಜಿ ಶಾಸಕರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ನಿನ್ನೆ ನಾಮಪತ್ರ ಸಲ್ಲಿಕೆ ವೇಳೆ ಕನಕಪುರದ ಫೋಟೋ ತೋರಿಸಿ ಪಿರಿಯಾಪಟ್ಟಣದಲ್ಲಿ ಸೇರಿದ ಜನಸಾಗರ ಎಂದು ಹೇಳುತ್ತಿರುವುದು ಅವರ ರಾಜಕೀಯ ಜೀವನದ ಘನತೆ ಎತ್ತಿ ತೋರಿಸುತ್ತದೆ ಈ ಬಾರಿಯ ತಾಲೂಕಿನ ಜನ ಬೆಂಬಲಿಸಿ ಗೆಲ್ಲಿಸುವ ವಿಶ್ವಾಸವಿದೆ ಎಂದರು.
ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪುರಸಭೆ ಅಧ್ಯಕ್ಷ ಕೆ.ಮಹೇಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಎಸ್ ಮಂಜುನಾಥ್, ಮುಖಂಡರಾದ ಎಸ್.ರಾಮು, ವಕೀಲರಾದ ಜೆ.ಎಸ್ ನಾಗರಾಜು, ಸಂದೀಪ್, ಯುವ ಮುಖಂಡ ಗಗನ್ ಮಹಿಳಾ ಘಟಕ ಅಧ್ಯಕ್ಷೆ ಪ್ರೀತಿ ಅರಸ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ನಾಗೇಂದ್ರ, ನಿರ್ದೇಶಕಿ ಸುನಿತಾ ಮಂಜುನಾಥ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಇದ್ದರು.