ಪಿರಿಯಾಪಟ್ಟಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ.ಮಹದೇವ್ ಉದ್ಘಾಟಿಸಿದರು, ತಹಸೀಲ್ದಾರ್ ಕುಂ ಞ ಅಹಮ್ಮದ್ ಸಿಡಿಪಿಒ ಮಮತ ಇದ್ದರು.

ಪಿರಿಯಾಪಟ್ಟಣ: ಸಾವಿರಾರು ವರ್ಷಗಳಿಂದ ಹೆಣ್ಣುಮಕ್ಕಳ ಶೋಷಣೆಯಾಗುತ್ತಿತ್ತು ಆದರೆ  ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಕೂಡ ಪುರುಷರಿಗೆ ಸರಿಸಮಾನವಾದ ಹಕ್ಕುಗಳನ್ನು ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದಲ್ಲಿ ಸಿಡಿಪಿಓ ಇಲಾಖೆ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಬೇಕಾದುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕಿದೆ, ಹೆಣ್ಣಿನ ಬಗ್ಗೆ ಗೌರವ ಮನೋಭಾವನೆಯಿಂದ ಕಂಡಾಗ ನೆಮ್ಮದಿ ಜೀವನ ನಡೆಸಬಹುದು, ಪೋಷಕರು ಹೆಣ್ಣು ಮಕ್ಕಳು ಎಂದು ತಾರತಮ್ಯ ಮಾಡದೆ ಅವರಿಗೂ ಸರಿಸಮಾನ ಹಕ್ಕು ಮತ್ತು ಸ್ಥಾನ ನೀಡಿದಾಗ ಸಮಾಜದಲ್ಲಿ ಅಭಿವೃದ್ಧಿ ಕಾಣಬಹುದು ಎಂದರು. 

ತಹಸೀಲ್ದಾರ್ ಕುಂ ಞ ಅಹಮದ್ ಅವರು ಮಾತನಾಡಿ ಪುರುಷರ ಏಳಿಗೆಯಲ್ಲಿ ಮಹಿಳೆ ತಾಯಿ ಹೆಂಡತಿ ಅಕ್ಕ ತಂಗಿ ಬಾಂಧವ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ, ಒನಕೆ ಓಬವ್ವ  ಮುಂತಾದ ವೀರ ಮಹಿಳೆಯರು ಬ್ರಿಟಿಷರ ವಿರುದ್ದ ಹೋರಾಡಿದ ಕಥೆ ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದರು.

ಸಿಡಿಪಿಓ ಮಮತಾ ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಶಿಕ್ಷಣ ಆರೋಗ್ಯ ಕೈಗಾರಿಕೆ ಸಾಮಾಜಿಕ ರಾಜಕೀಯ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಿಗಿಲಾದ ಸಾಧನೆ ತೋರುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ಈ ವೇಳೆ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು ಇಲಾಖೆ ಅಧಿಕಾರಿ ಮತ್ತು ನೌಕರರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು.

ಈ ಸಂದರ್ಭ ಎಸಿಡಿಪಿಓ ಅಶೋಕ್, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಜೆಡಿಎಸ್ ತಾಲೂಕು ಘಟಕ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗೇಂದ್ರ, ಮೇಲ್ವಿಚಾರಕರಾದ ಧನ್ಯರತಿ, ಸವಿತಾ, ಸುನಿತಾ, ರೇಖಾ, ಮತ್ತು ಕಾರ್ಯಕರ್ತೆಯರು ಸಹಾಯಕ ಸಿಬ್ಬಂದಿ ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top