ಪಿರಿಯಾಪಟ್ಟಣ: ಜೆಡಿಎಸ್ ಅಭ್ಯರ್ಥಿ ಶಾಸಕ ಕೆ.ಮಹದೇವ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡಿದರು.
ಈ ವೇಳೆ ಕೋಮಲಾಪುರ ಗ್ರಾಮದಲ್ಲಿ ಶಾಸಕ ಕೆ.ಮಹದೇವ್ ಅವರು ಮಾತನಾಡಿ ಜನಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದು ಅಧಿಕಾರ ಇಲ್ಲದ ಸಂದರ್ಭದಲ್ಲಿಯೂ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದೇನೆ ಶಾಸಕನಾದ ಬಳಿಕ ಗ್ರಾಮಗಳ ಭೇಟಿ ಸಂದರ್ಭ ಮತ್ತು ನನ್ನ ನಿವಾಸಕ್ಕೆ ಆಗಮಿಸಿ ಸಾರ್ವಜನಿಕರು ನೀಡುವ ಸಮಸ್ಯೆಗಳ ಮನವಿಯನ್ನು ಸರ್ಕಾರ ಇಲ್ಲದಿದ್ದರೂ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಹಂತ ಹಂತವಾಗಿ ಬಗೆಹರಿಸಿದ್ದೇನೆ ಶಾಸಕನಾಗಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಚುನಾವಣೆ ಸಂದರ್ಭ ಮತದಾರರು ಕೂಲಿ ನೀಡುವ ಅವಕಾಶ ಸಿಕ್ಕಿದ್ದು ನನ್ನ ಪ್ರಾಮಾಣಿಕ ಕೆಲಸ ಕಾರ್ಯಗಳನ್ನು ಮನಗಂಡು ಮುಂಬರುವ ಚುನಾವಣೆಯಲ್ಲಿಯೂ ಬೆಂಬಲಿಸಿ ಗೆಲ್ಲಿಸಿದರೆ ತಾಲೂಕಿನ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಅವರು ಮಾತನಾಡಿ ತಾಲೂಕಿನ ಪ್ರತಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಉತ್ತಮ ರಸ್ತೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಮೂಲಭೂತ ಸೌಕರ್ಯ ಸಮಸ್ಯೆ ಬಗೆಹರಿಸಿರುವ ಶಾಸಕ ಕೆ.ಮಹದೇವ್ ಅವರಿಗೆ ಮತ್ತೊಂದು ಅವಕಾಶ ನೀಡಿದರೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ ಎಂದರು.
ಈ ವೇಳೆ ತೆಲಗಿನಕುಪ್ಪೆ ಸೆಣಬಿನಕುಪ್ಪೆ ನೇರಳಕುಪ್ಪೆ ಕಂತೆಕೊಪ್ಪಲು ಕೆ.ಹೊಸಹಳ್ಳಿ ಸೀಗೆಕೂರೆಕಾವಲು ಬೆಟ್ಟೇಗೌಡನಕೊಪ್ಪಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಯಿತು.
ಈ ಸಂದರ್ಭ ಮಹಿಳಾ ಘಟಕ ಅಧ್ಯಕ್ಷೆ ಪ್ರೀತಿ ಅರಸ್, ಟಿಎಪಿಸಿಎಂಎಸ್ ನಿರ್ದೇಶಕಿ ಸುನಿತಾ ಮಂಜುನಾಥ್, ಮುಖಂಡರಾದ ವಕೀಲ ಗೋವಿಂದೇಗೌಡ, ಕೆ.ಕೆ ಅನಿತ್, ರಘುನಾಥ್, ಜನಪ್ರತಿನಿಧಿಗಳು ಮುಖಂಡರು ಇದ್ದರು.