ಪಿರಿಯಾಪಟ್ಟಣ: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಶನಿವಾರ ಶಾಸಕ ಕೆ.ಮಹದೇವ್ ಸೇರಿದಂತೆ ವಿವಿಧ ರಾಜಕೀಯ ಪಕ್ಷ ಮತ್ತು ಪಕ್ಷೇತರ 5 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ಪಕ್ಷದ ಅಭ್ಯರ್ಥಿ ಶಾಸಕ ಕೆ.ಮಹದೇವ್ ಸಾಂಪ್ರದಾಯಕವಾಗಿ ತಮ್ಮ ಪತ್ನಿ ಸುಭದ್ರಮ್ಮ ಪುತ್ರ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ವಕೀಲ ಜೆ.ಎಸ್ ನಾಗರಾಜ್ ಅವರೊಂದಿಗೆ ಕನ್ನಂಬಾಡಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ತಾಲೂಕು ಆಡಳಿತ ಭವನದಲ್ಲಿನ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ದಾಖಲೆಗಳನ್ನು ಪರಿಶೀಲರಿಗೆ ಸಲ್ಲಿಸಿ ನಂತರ ಚುನಾವಣಾಧಿಕಾರಿ ಎಸ್.ಕುಸುಮ ಕುಮಾರಿ ಅವರಿಗೆ ನಾಮಪತ್ರ ಸಲ್ಲಿಸಿದರು,
ಈ ದಿನ ಶುಭ ದಿನವಾಗಿರುವುದರಿಂದ ನಾಮಪತ್ರ ಸಲ್ಲಿಸಲಾಗಿದ್ದು ಏ.18 ರಂದು ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಾಗುವುದು ಎಂದು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.
ಈ ಸಂದರ್ಭ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಪುರಸಭೆ ಅಧ್ಯಕ್ಷ ಕೆ.ಮಹೇಶ್, ಸದಸ್ಯ ಮಂಜುನಾಥ್ ಸಿಂಗ್, ಮುಖಂಡರಾದ ಎಸ್.ರಾಮು, ಗೌಸ್ ಶರೀಫ್, ಅಶೋಕ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.
ಕೆಆರ್ಎಸ್ ಪಕ್ಷದಿಂದ ಸಾಹಿತಿ ಮತ್ತು ರೈತಪರ ಹೋರಾಟಗಾರ ಜೋಗನಹಳ್ಳಿ ಗುರುಮೂರ್ತಿಯವರು ನಾಮಪತ್ರ ಸಲ್ಲಿಸಿದರು, ಈ ಸಂದರ್ಭ ತಾಲೂಕು ಅಧ್ಯಕ್ಷ ಅಜಿತ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಪ್ರಭುಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಎಂ ರಾಜು, ಯುವ ಘಟಕ ಅಧ್ಯಕ್ಷ ಟಿ.ವಿ ಶೇಖರ್ ಕುಮಾರ್ ಇದ್ದರು.
ಉತ್ತಮ ಪ್ರಜಾಕೀಯ ಪಕ್ಷದಿಂದ ನವೀನ್ ಕುಮಾರ್ ಎಂಬವರು ಸ್ನೇಹಿತರಾದ ಮಹಾಲಿಂಗೇಗೌಡ, ಶೇಖರ್ ಗೌಡ, ದಿಲೀಪ್ ಗೌಡ, ಗಿರೀಶ್ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಪಕ್ಷೇತರ ಅಭ್ಯರ್ಥಿಗಳಾಗಿ ಪಿರಿಯಾಪಟ್ಟಣ ನಿವಾಸಿ ಪಿ.ಎಸ್.ಯಡೂರಪ್ಪ ಮತ್ತು ಬೂತನಹಳ್ಳಿ ಗ್ರಾಮದ ಬಿ.ಎಸ್ ಸುಬ್ರಮಣ್ಯ ನಾಮಪತ್ರ ಸಲ್ಲಿಸಿದರು.