ಪಿರಿಯಾಪಟ್ಟಣ: ಉಪ್ಪಾರ ಸಮಾಜದ ಮುಖಂಡರಿಗೆ ಇತರೆ ಪಕ್ಷಗಳಿಗಿಂತ ಹೆಚ್ಚಾಗಿ ಜೆಡಿಎಸ್ ಪಕ್ಷದಿಂದ ರಾಜಕೀಯ ಸ್ಥಾನಮಾನ ನೀಡಿ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ನಡೆದ ಉಪ್ಪಾರ ಸಮುದಾಯದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು, ತಾಲ್ಲುಕಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ಉದ್ದೇಶದಿಂದ ಬೆಟ್ಟದಪುರ ಹಾಗೂ ಹಾರನಹಳ್ಳಿ ಹೋಬಳಿಗಳಲ್ಲಿ ಮತ್ತೆರಡು ಹೊಸ ಕಾರ್ಖಾನೆ ತೆರೆಯುವ ಆಲೋಚನೆಯಿದೆ, ಈಗಾಗಲೇ ಪಶು ಆಹಾರ ಘಟಕ ಕಾರ್ಖಾನೆ ಸ್ಥಾಪನೆಗೆ ಅನುಮೋದನೆ ದೊರೆತಿದ್ದು ಕೆಲಸ ಪ್ರಾರಂಭವಾಗುತ್ತಿದೆ, ನನಗೋಸ್ಕರ ದುಡಿದ ಉಪ್ಪಾರ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎನ್ನುವ ಉದ್ದೇಶದಿಂದ ಮುಖಂಡರಗಳಿಗೆ ಹೆಚ್ಚು ಅವಕಾಶ ಮಾಡಿಕೊಟ್ಟು ಅವರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಿದ್ದೇನೆ ಹಿಂದಿನಂತೆ ಪ್ರೀತಿ ವಿಶ್ವಾಸ ಈ ಬಾರಿ ಚುನಾವಣೆಯಲ್ಲಿಯೂ ತೋರಿಸಬೇಕೆಂದು ಮನವಿ ಮಾಡಿ ತಾಲೂಕಿನ ಕೆಳ ವರ್ಗದ ಸಮುದಾಯದ ಬೆಳವಣಿಗೆಗೆ ಕೈಮೀರಿ ಸಹಾಯ ಮಾಡಿದ್ದೇನೆ ಇದು ನನ್ನ ಕೊನೆ ಚುನಾವಣೆಯಾಗಿದ್ದು ಮತದಾರರು ಬೆಂಬಲಿಸುವಂತೆ ಕೋರಿದರು.
ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಮಾತನಾಡಿ ಸೋಲಿನ ಹತಾಶೆಯಿಂದ ಪ್ರತಿ ಬಾರಿ ನಮ್ಮ ವಿರುದ್ಧ ಅಪಪ್ರಚಾರ ಮಾಡುವ ಕಾಂಗ್ರೆಸ್ ಕಾರ್ಯಕರ್ತರು ಮಹದೇವಣ್ಣ ಮಾಡಿರುವ ಅಭಿವೃದ್ಧಿ ಕೆಲಸಗಳನ್ನೇ ತೆಗೆದುಕೊಂಡು ಮಾತನಾಡುತ್ತಿದ್ದಾರೆ ಅವರ ಕೈಯಲ್ಲಿ ಆಗದಿದ್ದ ಕೆಲಸಗಳನ್ನು ಮಾಡಿ ತೋರಿಸಿರುವ ವಿಚಾರವನ್ನು ಸಹಿಸಿಕೊಳ್ಳದೆ ಅಪಪ್ರಚಾರ ಮಾಡುತ್ತಿರುವ ಇವರಿಗೆ ರಾಜಕೀಯ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು, ಸರ್ಕಾರ ಇಲ್ಲದಿದ್ದರೂ ಅಭಿವೃದ್ಧಿ ಏನೆಂಬುದನ್ನು ಶಾಸಕ ಕೆ.ಮಹದೇವ್ ರವರು ಮಾಡಿ ತೋರಿಸಿದ್ದಾರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಪ್ರಜ್ಞಾವಂತ ನಾಗರಿಕರಿಗೆ ತಿಳಿದಿದೆ ತಾಲ್ಲೂಕನ್ನು ಸರ್ವಾಂಗಿಣ ಅಭಿವೃದ್ಧಿ ಪಡಿಸಲು ಕನಸು ಕಾಣುತ್ತಿರುವ ಅವರಿಗೆ ಮತ್ತೊಂದು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ತಾ.ಪಂ ಮಾಜಿ ಅಧ್ಯಕ್ಷ ಜವರಪ್ಪ, ಮಾಜಿ ಸದಸ್ಯ ಎಸ್.ರಾಮು ಹಾಗೂ ಗ್ರಾ.ಪಂ ಸದಸ್ಯ ಬಸವನಹಳ್ಳಿ ನಾರಾಯಣ್ ಮಾತನಾಡಿ ಕಾರ್ಯಕರ್ತರು ಸಂಘಟನೆಗೆ ಹೆಚ್ಚು ಒತ್ತುಕೊಟ್ಟು ಈ ಬಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಕೆ.ಮಹದೇವ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪ್ರತಿ ಮನೆ ಮನೆಗೆ ತಲುಪಿಸಿ ಮುಂದಿನ ಚುನಾವಣೆಯಲ್ಲಿಯೂ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ನಾಗೇಂದ್ರ, ಮುಖಂಡರಾದ ಜಯಶಂಕರ್, ಲೋಕೇಶ್ ರಾಜೇಅರಸ್, ಸುಚಿತ್ರವಿನೋದ್, ಆಶಾ, ಮೈಲಾರಪ್ಪ, ಜಲೇಂದ್ರ, ಶಂಕರ್, ಕೃಷ್ಣಪ್ಪ, ಚಂದ್ರಶೇಖರ್, ನಾಗರಾಜ್, ಗಣೇಶ್, ಮಹದೇವ್, ಕುಮಾರ್ ಹಾಗೂ ಕಾರ್ಯಕರ್ತರು ಗ್ರಾಮಸ್ಥರು ಇದ್ದರು.