ತಾಲೂಕಿನ ಕೊಪ್ಪ ಗ್ರಾಮವನ್ನು ಹೋಬಳಿ ಕೇಂದ್ರವಾಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಕೆ.ಮಹದೇವ್ ಹೇಳಿದರು.

ತಾಲೂಕಿನ ಕೊಪ್ಪ ಗ್ರಾಮದಲ್ಲಿ 25ಲಕ್ಷ ವೆಚ್ಚದ ಗ್ರಾ.ಪಂ ವಾಣಿಜ್ಯ ಮಳಿಗೆ ಹಾಗೂ  ಮುತ್ತಿನಮುಳಸೋಗೆ ಗ್ರಾಮದಲ್ಲಿ 12ಲಕ್ಷ ವೆಚ್ಚದ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಹಾರನಹಳ್ಳಿ ಹೋಬಳಿ ಕೇಂದ್ರಕ್ಕೆ ಸರ್ಕಾರಿ ಕೆಲಸಗಳಿಗಾಗಿ ತೆರಳಲು ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಬಗ್ಗೆ ಹಲವು ವರ್ಷಗಳಿಂದ ಈ ಭಾಗದ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದೆ, ಬಿ.ಎಂ ಮುಖ್ಯ ರಸ್ತೆಯಲ್ಲಿರುವ ಹಾಗೂ ಉತ್ತಮ ವಾಣಿಜ್ಯ ಕೇಂದ್ರವಾಗಿರುವ ಕೊಪ್ಪ ಗ್ರಾಮವನ್ನು ಹೋಬಳಿ ಕೇಂದ್ರವಾಗಿ ಮಾಡಿದರೆ ಅನುಕೂಲವಾಗಲಿದ್ದು ಸಂಬಂಧಿಸಿದ ಇಲಾಖೆಗಳ ಮುಖಾಂತರ ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರ  ಮಟ್ಟದಲ್ಲಿ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ಸ್ಥಳೀಯ ಜನಪ್ರತಿನಿಧಿಗಳು ಸ್ವಾರ್ಥ ಬಿಟ್ಟು ಮೂಲಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಬೇಕು, ತಿಂಗಳ ಒಳಗಾಗಿ ಗ್ರಾಮಠಾಣ, ಸ್ಮಶಾನ, ಕೆರೆ ಒತ್ತುವರಿ ತೆರವು ಮತ್ತು ಕೊಪ್ಪ ಗ್ರಾಮದಲ್ಲಿ ಕಸ ವಿಲೇವಾರಿಗೆ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಮುಂದಿನ ದಿನಗಳಲ್ಲಿ ಕೊಪ್ಪದಲ್ಲಿ ಜೂನಿಯರ್ ಕಾಲೇಜು ತೆರೆಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಗೆ ಹೆಚ್ಚು ಒತ್ತು ನೀಡಿ  ಹೆಚ್ಚು ಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳುವಂತೆ ಆದೇಶಿದರು.

   ಜಿ.ಪಂ ಸದಸ್ಯ ವಿ.ರಾಜೇಂದ್ರ ಮಾತನಾಡಿ ಸರ್ಕಾರ  ಬದಲಾದ್ದರಿಂದ ಅಭಿವೃದ್ಧಿಗೆ ಸ್ವಲ್ಪ ಹಿನ್ನಡೆ ಉಂಟಾಗಿದ್ದು ನರೇಗಾ ಯೋಜನೆ ಮೂಲಕ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು.

   ಈ ಸಂದರ್ಭ ತಾ.ಪಂ ಸದಸ್ಯ ಮುತ್ತ, ಮಾಜಿ ಸದಸ್ಯ ಸೋಮಶೇಖರ್, ಕೊಪ್ಪ ಗ್ರಾ.ಪಂ ಅಧ್ಯಕ್ಷೆ ಶಾಹೀನಾ ಬಾನು, ಉಪಾಧ್ಯಕ್ಷ ಯಶವಂತ್ ಕುಮಾರ್, ಬೆಣಗಾಲು ಗ್ರಾ.ಪಂ ಅಧ್ಯಕ್ಷ ಸುಂದ್ರೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್, ಉಪ ತಹಸೀಲ್ದಾರ್ ನಿಜಾಮುದ್ದೀನ್, ಕಂದಾಯ ನಿರೀಕ್ಷಕ ಪ್ರದೀಪ್, ನಿರ್ಮಿತಿ ಕೇಂದ್ರದ ಎಇಇ ರಕ್ಷಿತ್, ಕೊಪ್ಪ ಗ್ರಾ.ಪಂ ಸದಸ್ಯರುಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top