
ಪಟ್ಟಣದ ತಾ.ಪಂ ಕಚೇರಿ ಬಳಿ ಇರುವ ಶಾಸಕರ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ರೈತ ಮುಖಂಡರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ತಾಲೂಕು ರೈತ ಸಂಘದ ಅಧ್ಯಕ್ಷ
ಪಿ.ಜೆ ಶಿವಣ್ಣಶೆಟ್ಟಿ ಮಾತನಾಡಿ ಯಾವುದೇ ತಿದ್ದುಪಡಿ ಅಥವಾ ಕಾಯ್ದೆ ರೂಪಿಸಲು ಸಾರ್ವಜನಿಕರ ಹಿತಾಸಕ್ತಿ ಇರಬೇಕು ಹಾಗೂ ಜನರ ಒಪ್ಪಿಗೆ ಇರಬೇಕು ಆದರೆ ಇವ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯಿದೆ ತಿದ್ದುಪಡಿಗೆ ಮುಂದಾಗಿರುವುದನ್ನು ಗಮನಿಸಿದರೆ ಉಳುವವನೇ ಭೂಮಿಯ ಒಡೆಯ ಎಂಬ ಪರಿಕಲ್ಪನೆಗೆ ತಿಲಾಂಜಲಿ ಇಟ್ಟು ಉಳ್ಳವರಿಗೆ ಮಾತ್ರ ಭೂಮಿ ಹೊಂದಲು ಸಾಧ್ಯವಾಗುತ್ತದೆ ಎಂದು ದೂರಿದರು, ಈ ತಿದ್ದುಪಡಿ ಕಾಯ್ದೆಯು ಜಾರಿಗೆ ಬಂದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಸಣ್ಣ ಹಿಡುವಳಿ ರೈತರ ಬದುಕು ಬೀದಿಗೆ ಬೀಳಲಿದೆ, ಉದ್ಯೋಗವನ್ನು ಅರಸಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ, ದಲಿತರು ಅತ್ಯಂತ ಸಂಕಷ್ಟಕ್ಕೀಡಾಗುತ್ತಾರೆ, ರೈತಾಪಿ ಕೃಷಿ ಸಂಸ್ಕೃತಿ ಮಾಯವಾಗಿ ಬಂಡವಾಳಿಗರ ಕೃಷಿ ಸಂಸ್ಕೃತಿ ಬೆಳೆಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಗಳಿಂದ ಶಾಸಕರಾಗಿ ಆಯ್ಕೆಯಾಗಿ ಹೋಗಿರುವವರು ಯಾವುದೇ ಪಕ್ಷದಲ್ಲಿರಲಿ ಪಕ್ಷಾತೀತವಾಗಿ ಈ ತಿದ್ದುಪಡಿಯ ವಿರುದ್ಧ ದನಿ ಎತ್ತುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಶಾಸಕ ಕೆ.ಮಹದೇವ್ ಮಾತನಾಡಿ ಈ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ವಿರುದ್ಧ ಸದನದಲ್ಲಿ ಚರ್ಚಿಸಿ ಆಕ್ಷೇಪ ವ್ಯಕ್ತಪಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್ ಸ್ವಾಮಿಗೌಡ, ಗೌರವಾಧ್ಯಕ್ಷ ಕೆ.ಜಿ ಪ್ರಕಾಶ್ ರಾಜೇಅರಸ್, ಉಪಾಧ್ಯಕ್ಷ ಟಿ.ಸಿ ಶ್ರೀನಿವಾಸ್, ಖಜಾಂಚಿ ಕೃಷ್ಣೇಗೌಡ, ಸಂಚಾಲಕರಾದ ಜವರೇಗೌಡ, ಬಿ.ಪಿ ಸ್ವಾಮಿ, ತಾ.ಪಂ ಸದಸ್ಯ
ಎಸ್.ರಾಮು ಮತ್ತಿತರರು ಇದ್ದರು.