
ಪಟ್ಟಣದ ಪುರಸಭೆ ವತಿಯಿಂದ ಧ್ವನಿವರ್ಧಕ ಮೂಲಕ ಮಾಹಿತಿ ನೀಡಿ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗಿತ್ತು, ಶನಿವಾರ ಮತ್ತು ಭಾನುವಾರಗಳಂದು ಪಟ್ಟಣದ ವರ್ತಕರು ಸ್ವಯಂಪ್ರೇರಿತವಾಗಿ ಮಧ್ಯಾಹ್ನ 2ಗಂಟೆಯ ನಂತರ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬೆಂಬಲ ಸೂಚಿಸಿದರು. ತಾ.ಪಂ ವತಿಯಿಂದ ತಾಲೂಕಿನಾದ್ಯಂತ ಎಲ್ಲಾ ಗ್ರಾ.ಪಂ ಸಿಬ್ಬಂದಿಗೆ ಸ್ವಯಂ ಪ್ರೇರಿತ ಲಾಗ್ ಡೌನ್ ಮಾಹಿತಿ ನೀಡಿದ್ದರಿಂದ ಎಚ್ಚೆತ್ತ ಅಧಿಕಾರಿ ಮತ್ತು ಸಿಬ್ಬಂದಿ ಗ್ರಾಮಾಂತರ ಪ್ರದೇಶಗಳಲ್ಲೂ ಮಧ್ಯಾಹ್ನದ ನಂತರದ ವ್ಯಾಪಾರ ವಹಿವಾಟಿಗೆ ಸೂಚನೆ ನೀಡಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಸ್ವಯಂಪ್ರೇರಿತ ಲಾಕ್ ಡೌನ್ ನಿಯಮ ಸಡಿಸಲು ಮನವಿ: ಪಟ್ಟಣದ ಹೋಟೆಲ್ ಉದ್ಯಮಿಗಳು, ಬೇಕರಿ ಅಂಗಡಿಗಳ ಮಾಲೀಕರು, ರಸ್ತೆ ಬದಿ ವ್ಯಾಪಾರಸ್ಥರು, ಕ್ಷೌರಿಕ ಅಂಗಡಿಗಳು ಸೇರಿದಂತೆ ವಿವಿಧ ಬಗೆಯ ವ್ಯಾಪಾರಸ್ಥರು ಪಟ್ಟಣದ ವೈದ್ಯೇಶ್ವರ ದೇವಸ್ಥಾನ ಮುಂಭಾಗ ಶನಿವಾರ ಸಭೆ ಸೇರಿ ತಾಲೂಕು ಆಡಳಿತದ ಸ್ವಯಂಪ್ರೇರಿತ ಲಾಕ್ ಡೌನ್ ನಿರ್ಧಾರದಿಂದಾಗಿ ನಮ್ಮ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದ್ದು ಮಾರ್ಚ್- ಏಪ್ರಿಲ್- ಮೇ ತಿಂಗಳಿನಲ್ಲಿನ ಲಾಕ್ ಡೌನ್ ನಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ನಾವೆಲ್ಲರೂ ಮತ್ತೊಮ್ಮೆ ಕೇವಲ ಅರ್ಧ ದಿನ ಮಾತ್ರ ವ್ಯಾಪಾರ ನಡೆಸಿದಲ್ಲಿ ನಮ್ಮ ಕುಟುಂಬದ ಜೀವನ ನಿರ್ವಹಣೆ, ಸಿಬ್ಬಂದಿ ವೇತನ, ಕಟ್ಟಡ ಬಾಡಿಗೆ ಕಟ್ಟಲು ಸಹ ಕಷ್ಟಕರವಾಗಲಿದೆ ಎಂಬ ಅಭಿಪ್ರಾಯಕ್ಕೆ ಬಂದು ಈ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತರಬೇಕೆಂಬ ತೀರ್ಮಾನಕ್ಕೆ ಬಂದ ಎಲ್ಲ ವ್ಯಾಪಾರಸ್ಥರು ತಾಲೂಕು ಕಚೇರಿಯಲ್ಲಿ ಶಾಸಕ ಕೆ.ಮಹದೇವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಇವರ ಮನವಿಗೆ ಪ್ರತಿಕ್ರಿಯಿಸಿದ ಶಾಸಕ ಕೆ.ಮಹದೇವ್ ಈವರೆಗೂ ತಾಲೂಕಿನಲ್ಲಿ ಕೊರೋನ ಸೋಂಕು ಕಂಡು ಬಂದಿರಲಿಲ್ಲ ಆದರೆ ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಐದು ಕರೋನ ಸೋಂಕು ಪ್ರಕರಣಗಳು ದೃಢಪಟ್ಟಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡಲು ಪ್ರಾರಂಭಗೊಂಡಲ್ಲಿ ಜನಜೀವನ ಅಸ್ತವ್ಯಸ್ತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕಿರುವುದರಿಂದ ಎಲ್ಲಾ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಸಹಕರಿಸುವಂತೆ ಮನವಿ ಮಾಡಿ ಹೋಟೆಲ್ ಮತ್ತು ಬೇಕರಿ ಉದ್ಯಮಗಳು ಮಧ್ಯಾಹ್ನ ಮೂರು ಗಂಟೆಯವರೆಗೆ ಸೇವೆ ನೀಡಿ ಬಳಿಕ ಸಂಜೆ ಏಳು ಗಂಟೆಯವರೆಗೆ ಪಾರ್ಸಲ್ ನೀಡುವಂತೆ ಸೂಚಿಸಿದರು.
ಶಾಸಕರ ಸೂಚನೆಗೆ ವ್ಯಾಪಾರಸ್ಥರು ಒಪ್ಪಿಗೆ ಸೂಚಿಸಿದರು. ಈ ಸಂದರ್ಭ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ಹೊಟೇಲ್ ಉದ್ಯಮಿಗಳಾದ ಹರಿಪ್ರಿಯಕುಮಾರ್, ಶಂಕರ್, ರಮೇಶ್, ಜಯಸ್ವಾಮಿ, ಉಮೇಶ್, ನಯನ್, ಶಿವಕುಮಾರ್, ಮಹದೇವ ಸೇರಿದಂತೆ ಹಲವರು ಹಾಜರಿದ್ದರು.