ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷ ಹೆಚ್ಚು ಸ್ಥಾನ ಗಳಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬುಧವಾರ ತೆರಳುತ್ತಿದ್ದ ಸಂದರ್ಭ ಪಿರಿಯಾಪಟ್ಟಣದ ಶಾಸಕ ಕೆ.ಮಹದೇವ್ ಅವರ ಮನೆಗೆ ಭೇಟಿ ನೀಡಿ ಮಾತನಾಡಿದರು, 2018 ರ ಅತಿವೃಷ್ಟಿ ಸಮಯ ಕೊಡಗು ಜಿಲ್ಲೆಯಾದ್ಯಂತ ಹಲವೆಡೆ ಭೂಕುಸಿತ ಮತ್ತಿತರ ಅನಾಹುತಗಳು ಸಂಭವಿಸಿ ಸಾವಿರಾರು ಕುಟುಂಬ ಮನೆಗಳನ್ನು ಕಳೆದುಕೊಂಡಿದ್ದರು, ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ನಿರಾಶ್ರಿತರಿಗೆ ಆಸರೆಯಾಗಿ ಕುಮಾರಸ್ವಾಮಿ ಕೊಡಗು ಜಿಲ್ಲೆಯಲ್ಲಿ ತಲಾ 9.80 ಲಕ್ಷ ರೂಪಾಯಿ ವೆಚ್ಚದ ಒಂದು ಸಾವಿರ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದರು, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರದ ಹಣ ಬರದಿದ್ದರೂ ಸಹಾ ರಾಜ್ಯ ಸರ್ಕಾರದಿಂದಲೇ ಮನೆಗಳನ್ನು ಕಳೆದುಕೊಂಡಿದ್ದವರಿಗೆ ತಲಾ ಒಂದು ಲಕ್ಷ ರೂಪಾಯಿ ಮತ್ತು ನಿರ್ವಸತಿಗರಿಗೆ ಒಂದು ವರ್ಷ ಕಾಲ ಬಾಡಿಗೆ ಮನೆಗಳ ಬಾಡಿಗೆಯನ್ನು ಪಾವತಿಸಿದ್ದರು ಎಂದರು. 

   ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಕೊಡಗು ಜಿಲ್ಲೆಯಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಪ್ರವಾಹ ಪರಿಸ್ಥಿತಿ ಪುನರಾವರ್ತನೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವತ್ತ ಮುಂದಾಗಬೇಕು, ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಸಂಸದರು ಕೊಡಗು ಜಿಲ್ಲೆಯಲ್ಲಿನ ನೆರೆ ಪೀಡಿತ ಸಂತ್ರಸ್ತರಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಮೂಲಕ ನೀಡಿರುವ ಭರವಸೆಗಳನ್ನು ಮತ್ತು ಆಶ್ವಾಸನೆಗಳನ್ನು ಈಡೇರಿಸಬೇಕಿದೆ, 

   ರಾಜಕಾರಣ ಹಿನ್ನೆಲೆ ಹೊಂದಿರುವ ಕುಟುಂಬದವನಾದ ನಾನು ಮನಸ್ಸು ಮಾಡಿದ್ದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಶಾಸಕನಾಗಬಹುದಿತ್ತು ಆದರೆ ಚಿತ್ರರಂಗದಲ್ಲಿ ವೈಯಕ್ತಿಕವಾಗಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ ರಾಜಕೀಯ ಹಾಗೂ ಚಿತ್ರರಂಗ ಎರಡೂ ಕ್ಷೇತ್ರಗಳನ್ನು ಸಮಾನವಾಗಿ ಸರಿದೂಗಿಸಿಕೊಂಡು ಹೋಗುತ್ತಿದ್ದೇನೆ ಎಂದರು.

   ಯಾವುದೇ ರಾಜಕೀಯ ಪಕ್ಷ ಎಂದ ಮೇಲೆ ಭಿನ್ನಾಭಿಪ್ರಾಯಗಳು ಸಹಜ, ಪಕ್ಷದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಹೋಗುವ ಪ್ರಯತ್ನ ಮಾಡಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಈಗಿನಿಂದಲೇ ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲಾಗುವುದು, ರಾಜ್ಯದಲ್ಲಿ ಪಕ್ಷದ ಬಲವರ್ಧನೆಗಾಗಿ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ರನ್ನು ನಾನು ಭೇಟಿ ಮಾಡಿದ್ದು ನಿಜ ಆದರೆ ಪಕ್ಕದ ಆಂಧ್ರ ರಾಜ್ಯದಲ್ಲಿ ಪಾದಯಾತ್ರೆ ನಡೆಸುವ ಮೂಲಕ ಅಧಿಕಾರಕ್ಕೆ ಬಂದ ರೀತಿಯಲ್ಲಿ ರಾಜ್ಯದಲ್ಲಿ ಪಾದಯಾತ್ರೆ ಮಾಡಲು ಗಂಭೀರವಾದ ಸಮಸ್ಯೆಗಳು ಏನು ಎಂದು ಪರಿಶೀಲಿಸಬೇಕಾಗಿದೆ ಎಂದರು. 

    ಈ ಸಂದರ್ಭ ಶಾಸಕರ ಪುತ್ರ ಹಾಗೂ ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಸದಸ್ಯರಾದ ಟಿ.ಈರಯ್ಯ, ಎಸ್.ರಾಮು, ಪುರಸಭಾ ಸದಸ್ಯರಾದ ಪಿ.ಸಿ ಕೃಷ್ಣ, ಮಂಜುನಾಥ್ ಸಿಂಗ್, ಪ್ರಕಾಶ್ ಸಿಂಗ್ ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top