ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ತಾಲೂಕಿನ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದ್ದು ಈ ಬಾರಿ ತಾಲೂಕಿನಲ್ಲಿ ಶೇ.100 ಫಲಿತಾಂಶ ಪಡೆದ ಪ್ರಥಮ ಸರ್ಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊದಲು ಫಲಿತಾಂಶ ಪ್ರಕಟವಾದಾಗ ಪರೀಕ್ಷೆ ಬರೆದ 49 ವಿದ್ಯಾರ್ಥಿಗಳಲ್ಲಿ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಇಬ್ಬರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿ ಶೇ.96 ಫಲಿತಾಂಶ ಲಭಿಸಿತ್ತು, ಮರು ಮೌಲ್ಯಮಾಪನದಲ್ಲಿ ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ಲಭಿಸಿದೆ.

   ಅಭಿನಂದನೆ: ಶಿಕ್ಷಕರ ದಿನಾಚರಣೆಯಂದು ಶಾಸಕ ಕೆ.ಮಹದೇವ್ ಅವರು ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗಶೆಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿ ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳಲ್ಲಿ ಸಿಗುವಂಥ ಮೂಲಭೂತ ಸೌಕರ್ಯಗಳಿಗಿಂತ ಹೆಚ್ಚು ಸೌಕರ್ಯ ಒದಗಿಸುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣದ ಪ್ರಗತಿಗೆ ಒತ್ತು ನೀಡುತ್ತಿರುವುದು ಸಂತಸದ ವಿಷಯವಾಗಿದೆ ಇದಕ್ಕೆ ಕಾರಣರಾದ ಮುಖ್ಯ ಶಿಕ್ಷಕ ನಾಗಶೆಟ್ಟಿ ಹಾಗೂ ಎಲ್ಲ ಶಿಕ್ಷಕರ ಸೇವಾ ಮನೋಭಾವನೆ ಶ್ಲಾಘನೀಯ ಎಂದರು.

  ಮುಖ್ಯ ಶಿಕ್ಷಕ ನಾಗಶೆಟ್ಟಿ ಮಾತನಾಡಿ ಶಿಕ್ಷಕರೆಲ್ಲರ ಸಹಕಾರದಿಂದ ಉತ್ತಮ ಬೋಧನೆಯ ಜೊತೆಗೆ ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಅಭ್ಯಾಸದಿಂದ ಉತ್ತಮ ಫಲಿತಾಂಶ ದೊರೆಯಲು ಕಾರಣವಾಯಿತು, ಶಾಲೆಯ ಹಿರಿಯ ವಿದ್ಯಾರ್ಥಿಗಳು ಗ್ರಾಮಸ್ಥರು ಹಾಗೂ ಶಿಕ್ಷಣಾಸಕ್ತರ ಸಹಕಾರದಿಂದ ಶಾಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗುತ್ತಿದೆ ಎಂದರು.

    ಈ ಸಂದರ್ಭ ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಜಿ.ಪಂ ಸದಸ್ಯೆ ಕೌಸಲ್ಯ, ಬಿಇಓ ತಿಮ್ಮೇಗೌಡ ಮತ್ತಿತರರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top