
ಪಿರಿಯಾಪಟ್ಟಣ:ಪಟ್ಟಣದ ಹೊರವಲಯದ ಹಜರತ್ ಬೋಲೆ ಬಾಲೆ ವಾಲಿ ಖಾದ್ರಿ ದರ್ಗಾದಲ್ಲಿ 45ಲಕ್ಷ ವೆಚ್ಚದ ನೂತನ ಅತಿಥಿಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಮಾಜಿ ಶಾಸಕರ ಅನುದಾನದ ಕಾಮಗಾರಿಗಳಿಗೆ ನಾನು ಚಾಲನೆ ನೀಡುತ್ತಿರುವುದಾಗಿ ಕೆಲ ವಿರೋಧಿಗಳು ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಅದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶಾಸಕ ಕೆ.ಮಹದೇವ್ ಸವಾಲು ಹಾಕಿದರು. ವಿನಾಕಾರಣ ಆಪಾದನೆ ಮಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಸಮುದಾಯಕ್ಕೆ ನಾಲ್ಕು ಕೋಟಿ ರೂ ಹಣ ನೀಡಲಾಗಿದೆ ಅಲ್ಪಸಂಖ್ಯಾತರೆ ಹೆಚ್ಚಾಗಿ ವಾಸಿಸುವ ವಾರ್ಡ್ ನಂಬರ್ ೨೦ರ ಅಭಿವೃದ್ದಿಗೆ ಒಂದು ಕೋಟಿ ರೂಗಳ ಅನುದಾನವನ್ನು ನೀಡಲಾಗುತ್ತಿದೆ ಆದ್ದರಿಂದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ನಾನು ಅಲ್ಪಸಂಖ್ಯಾತ ನಿಗಮದ ನಿರ್ದೇಶಕನಾಗಿ ಕೆಲಸ ಮಾಡಿದ ಸಂದರ್ಭದಲ್ಲಿ 45 ಲಕ್ಷ ರೂಗಳ ಅನುದಾನವನ್ನು ದರ್ಗಾದ ಅಭಿವೃದ್ಧಿಗಾಗಿ ಮೀಸಲಿಡಲಾಗಿತ್ತು. ಇದಲ್ಲದೆ ರಾಜ್ಯದಲ್ಲಿ ಒಟ್ಟು ಐದು ದರ್ಗಾಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿತ್ತು. ಅಧ್ಯಕ್ಷ ಕುಮಾರ್ ಬಂಗಾರಪ್ಪ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಆಸ್ತಿಗಳ ರಕ್ಷಣೆ ಮತ್ತು ದುರುಪಯೋಗ ತಡೆಯುವ ನಿಟ್ಟಿನಲ್ಲಿ ಉತ್ತಮ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಪಿರಿಯಾಪಟ್ಟಣದಲ್ಲಿ ಇಲ್ಲಿಯವರೆಗೆ ವಕ್ಫ್ ಮಂಡಳಿ ವತಿಯಿಂದ ಎಷ್ಟು ಹಣ ಬಿಡುಗಡೆಯಾಗಿದೆ ಎಂಬ ಪಟ್ಟಿಯನ್ನು ನಾನು ತರಿಸಿಕೊಂಡಿದ್ದು ಅದರ ಅಧ್ಯಯನ ನಡೆಸುತ್ತಿದ್ದೇನೆ. ಹಿಂದೆ ಯಾವ ಅನುದಾನ ಎಲ್ಲೆಲ್ಲಿ ದುರುಪಯೋಗದ ಆಗಿದೆ ಎಂಬುದನ್ನು ಸಂಪೂರ್ಣ ಅರಿತ ನಂತರ ಅದರ ಬಗ್ಗೆ ಕ್ರಮವಹಿಸುವೆ.
ಈ ದರ್ಗಾ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಯಾಗಬೇಕು ಮುಸ್ಲಿಂ ಸಮುದಾಯದವರು ಪೂಜಿಸುವ ದೇವರಿಗೆ ನಡೆದುಕೊಳ್ಳಲು ಬರುವ ಭಕ್ತಾದಿಗಳಿಗೆ ಉತ್ತಮ ವಿಶ್ರಾಂತಿಗೃಹ ಎಲ್ಲಾ ಮೂಲಸೌಕರ್ಯಗಳೊಡನೆ ನಿರ್ಮಾಣವಾಗಬೇಕು. ಇದಕ್ಕಾಗಿ ೫೦ ಲಕ್ಷ ರೂಗಳ ಹೆಚ್ಚಿನ ಅನುದಾನವನ್ನು ನೀಡಲು ಸಿದ್ಧನಿದ್ದೇನೆ ಇದರ ಸದುಪಯೋಗವನ್ನು ಮುಸ್ಲಿಂ ಸಮುದಾಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಾನು ಶಾಸಕನಾಗಿ ಆಯ್ಕೆಯಾಗಿ ಎರಡೂವರೆ ವರ್ಷಗಳೇ ಕಳೆದವು ಇಲ್ಲಿಯವರೆಗೂ ಹಿಂದಿನ ಶಾಸಕರ ಅನುದಾನ ಹಾಗೇ ಉಳಿದಿರುತ್ತದೆಯೆ ಎಂದು ಪ್ರಶ್ನಿಸಿ ವಿರೋಧ ಪಕ್ಷದವರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಅದಕ್ಕೆ ಸರ್ಕಾರದಿಂದ ಹೆಚ್ಚು ಅನುದಾನ ತಂದು ನೂತನ ಕಾಮಗಾರಿಗಳನ್ನು ಆರಂಭಿಸುವುದರ ಮೂಲಕ ತಕ್ಕ ಉತ್ತರ ನೀಡುತ್ತಿದ್ದೇನೆ, ಸರ್ಕಾರ ಯಾವುದೇ ಇರಲಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ ಎಂದರು.

ಈಗಾಗಲೇ ತಾಲ್ಲೂಕಿನಲ್ಲಿ ಅಲ್ಪಸಂಖ್ಯಾತರು ವಾಸಿಸುವ ಹಳ್ಳಿಗಳಿಗೆ ಕೋಟಿ ಅನುದಾನ ಮಂಜೂರು ಮಾಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ ರವರು ಉತ್ತಮ ಕಾರ್ಯಗಳನ್ನು ನಿರ್ವಹಿಸುತ್ತಿರುವುದಾಗಿ ಶ್ಲಾಘಿಸಿ ಹಿಂದೆ ತಾಲ್ಲೂಕಿನ ಅಲ್ಪಸಂಖ್ಯಾತರಿಗೆ ದೊರೆತ ಅನುದಾನಗಳ ಅಂಕಿಅಂಶ ಪಡೆದಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭ ಜಾಮಿಯಾ ಮಸೀದಿ ಗುರುಗಳಾದ ಜಲೀಲ್ ಅಹ್ಮದ್, ಮುಖಂಡರಾದ ಮುಕ್ತಾರ್ ಪಾಷಾ, ರಫೀಕ್, ಅಮ್ಜದ್ ಪಾಷಾ, ಸೈಯದ್ ಇಲಿಯಾಸ್, ಮುಶೀರ್ ಖಾನ್, ಅಬ್ದುಲ್ ಅಜೀಜ್, ಅನ್ಸಾರ್, ಇಮ್ತಿಯಾಜ್ ಅಹ್ಮದ್,ಮುನಾಫ್, ಅತಹಿರ್, ಇದ್ರಿಸ್, ಮುಸಾಮಿಲ್, ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್ ಮತ್ತು ಸದಸ್ಯರು, ಅಲ್ಪಸಂಖ್ಯಾತ ಮುಖಂಡರು ಹಾಜರಿದ್ದರು.
