ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಪ್ರಥಮ ಬಾರಿಗೆ ಶಾಸಕ ಕೆ.ಮಹದೇವ್ ತಾಲ್ಲೂಕಿನ ವಿವಿದೆಡೆ ಪ್ರವಾಸ ಕೈಗೊಂಡು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ, ಮತದಾರರಿಗೆ ಅಭಿನಂದನೆ ಹಾಗೂ ಗ್ರಾಮಗಳ ಮೂಲಭೂತ ಸೌಕರ್ಯಗಳ ಕುಂದುಕೊರತೆ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದು ಸ್ಥಳದಲ್ಲಿ ಹಾಜರಿದ್ದ ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಆದೇಶ ನೀಡಿದರು.
ತಾಲ್ಲೂಕಿನ ಚಿಟ್ಟೇನಹಳ್ಳಿ, ಬೆಳತೂರು, ನಾರಳಾಪುರ, ಬಿ.ಎಂ.ಕೊಪ್ಪಲು, ಚನ್ನೇನಹಳ್ಳಿ, ಚೌಡೇನಹಳ್ಳಿ, ಹೆಮ್ಮಿಗೆ, ಜಿ.ಬಸವನಹಳ್ಳಿ, ಕಂದೇಗಾಲ, ದೊಡ್ಡಮಾಗಳಿ, ಚಿಕ್ಕಮಾಗಳಿ, ಬೇಗೂರು, ಮುತ್ತೂರು, ಕಾಳೇತಿಮ್ಮನಹಳ್ಳಿ, ಲಿಂಗಾಪುರ, ಆಯರಬೀಡು ಗ್ರಾಮಗಳಿಗೆ ಭೇಟಿ ನೀಡಿದರು.
ಒತ್ತುವರಿ ತೆರವಿಗೆ ಸೂಚನೆ : ತಾಲ್ಲೂಕಿನ ವಿವಿದೆಡೆ ಸರ್ಕಾರಿ ಜಾಗಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಹಲವು ದೂರುಗಳು ಕೇಳಿ ಬರುತ್ತಿದ್ದು ಅಧಿಕಾರಿಗಳು ನನ್ನನ್ನು ಸೇರಿದಂತೆ ಯಾವುದೇ ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗದೆ ಅಳತೆ ಕಾರ್ಯ ಮಾಡಿಸಿ ಒತ್ತುವರಿ ಜಾಗಗಳನ್ನು ತೆರವುಗೊಳಿಸಿ ವಸತಿ ರಹಿತರಿಗೆ ನೀಡುವಂತೆ ತಹಸೀಲ್ದಾರ್ಗೆ ಸೂಚಿಸಿದರು.
ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ : ಮಾಜಿ ಶಾಸಕರ ಅವಧಿಯಲ್ಲಿ ರಾಜಕೀಯ ಪ್ರೇರಿತವಾಗಿ ಹಲವು ಗ್ರಾಮಗಳು ಅಭಿವೃದ್ದಿ ಕಾಣದೆ ಹಿಂದುಳಿದಿದ್ದು ಅಂತಹ ಗ್ರಾಮಗಳಿಗೆ ಮೊದಲ ಆದ್ಯತೆ ನೀಡಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸಿ ತಾಲ್ಲೂಕಿನಾದ್ಯಂತ ಯಾವುದೇ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನಿಗವಹಿಸಬೇಕು ಎಂದರು.
ಅಧಿಕಾರಿಗಳು ಹಾಜರಿರುವಂತೆ ನಿರ್ದೇಶನ : ತಾಲ್ಲೂಕು ಪ್ರವಾಸದ ವೇಳೆ ಎಲ್ಲಾ ಸರ್ಕಾರಿ ಇಲಾಖೆಯ ಅಧಿಕಾರಿಗಳು ತಮ್ಮ ಜೊತೆಗಿದ್ದು ಸಾರ್ವಜನಿಕರು ನೀಡುವ ಬೇಡಿಕೆಗಳನ್ನು ಈಡೇರಿಸಲು ಹಣ ಕೇಳದೆ ಲಂಚ ರಹಿತವಾಗಿ ಕೆಲಸವಾಗಲು ಕ್ರಮಕೈಗೊಳ್ಳಬೇಕೆಂದು ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದರು.