
ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾಸಕ ಕೆ.ಮಹದೇವ್ ಅವರು ಮಾತನಾಡಿ ಸಮಾಜದಲ್ಲಿನ ಯಾವುದೇ ವರ್ಗದ ಹಿಂದುಳಿದವರ ಪರ ಹೋರಾಟ ಮಾಡಿ ವಿಶ್ವ ಶ್ರೇಷ್ಠ ಸಂವಿಧಾನ ರಚಿಸುವ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕೀರ್ತಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.

ಖಾಸಗಿ ವಾಹಿನಿಯೊಂದರಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರಾವಾಹಿ ಅತ್ಯುತ್ತಮವಾಗಿ ಮೂಡಿ ಬರುತ್ತಿದ್ದು ಪ್ರತಿಯೊಬ್ಬರು ವೀಕ್ಷಿಸುವಂತೆ ಕೋರಿದರು, ಕಾರ್ಯಕ್ರಮದಲ್ಲಿ ತಾಲ್ಲೂಕು ದಸಂಸ ಮುಖಂಡರು ತಾಲ್ಲೂಕು ಆಡಳಿತ ಕಚೇರಿ ಮುಂಭಾಗದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡುವಂತೆ ಶಾಸಕರನ್ನು ಕೋರಿದಾಗ ಪುತ್ಥಳಿ ನಿರ್ಮಾಣಕ್ಕೆ ಕಾನೂನಾತ್ಮಕವಾಗಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಕೆ.ಚಂದ್ರಮೌಳಿ ಅವರಿಗೆ ಸೂಚಿಸಿದರು.

ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಉಪನ್ಯಾಸಕ ಪುಟ್ಟಮಾದಯ್ಯ ಅವರು ಡಾ.ಬಿ.ಆರ್ ಅಂಬೇಡ್ಕರ್ ಅವರು ಸಮಾಜದಲ್ಲಿನ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆಸಿ ಪ್ರತಿಯೊಬ್ಬರನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಹಲವು ಪತ್ರಿಕೆಗಳನ್ನು ಹೊರತಂದು ಜನರಲ್ಲಿ ಅರಿವು ಮೂಡಿಸಿದರು, ಸಮಾಜದಲ್ಲಿ ಶೋಷಿತರು ಮೇಲ್ವರ್ಗದವರಾಗಲಿ ಅಥವಾ ಕೆಳವರ್ಗದವರಾಗಲಿ ಅವರ ಪರ ನನ್ನ ಧ್ವನಿ ಎಂಬುದು ಅಂಬೇಡ್ಕರ್ ಅವರ ವಾದವಾಗಿತ್ತು, ವಿಶ್ವ ಶ್ರೇಷ್ಠ ಸಂವಿಧಾನ ರಚಿಸುವ ಮೂಲಕ ಮೀಸಲಾತಿ ನಿಗದಿಪಡಿಸಿ ರಾಜಕೀಯ ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಮಹಿಳೆಯರಿಗೆ ಪುರುಷರಷ್ಟೇ ಸರಿಸಮಾನ ಎಂಬ ಸ್ಥಾನಮಾನ ನೀಡಿದರು, ಅಂಬೇಡ್ಕರ್ ಅವರ ಸಂವಿಧಾನದ ಅಂಶಗಳು ಇನ್ನೂ ಪರಿಪೂರ್ಣ ಜಾರಿಯಾಗದಿರುವುದು ವಿಷಾದಕರ ಸಂಗತಿಯಾಗಿದ್ದು ಮುಂಬರುವ ದಿನಗಳಲ್ಲಾದರೂ ಅದನ್ನು ಪರಿಪೂರ್ಣ ಜಾರಿಗೊಳಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸುವಂತೆ ಕೋರಿದರು.

ದಸಂಸ ಮುಖಂಡ, ತಾ.ಪಂ ಸದಸ್ಯ ಎಸ್.ರಾಮು ಮಾತನಾಡಿ ಅಂಬೇಡ್ಕರ್ ಅವರ ಸಂವಿಧಾನದ ಅಂಶಗಳ ವಿರೋಧಿ ನಡೆಗಳನ್ನು ಪ್ರಸ್ತುತ ಸಮಾಜದಲ್ಲಿ ಕಾಣುತ್ತಿದ್ದು ಅದರ ವಿರುದ್ಧ ಪ್ರತಿಯೊಬ್ಬರು ಜಾಗೃತರಾಗಿ ಹೋರಾಟ ಮಾಡುವ ಮೂಲಕ ಸಮಾಜದಲ್ಲಿನ ಎಲ್ಲಾ ವರ್ಗದ ಶೋಷಿತರಿಗೆ ಸರಿಸಮಾನ ಹಕ್ಕು ಒದಗಿಸಬೇಕಿದೆ ಎಂದರು.

ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಮಾತನಾಡಿ ವಿಶ್ವಶ್ರೇಷ್ಠ ಸಂವಿಧಾನಕ್ಕೆ ಈಚಿನ ದಿನಗಳಲ್ಲಿ ಹಲವು ತಿದ್ದುಪಡಿಗಳಾದರು ಅದರ ಪರಿಪೂರ್ಣ ಜಾರಿಯಾಗದಿರುವುದು ವಿಷಾದನೀಯ, ಸಂವಿಧಾನದಲ್ಲಿನ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಜಿ.ಪಂ ಸದಸ್ಯೆ ಕೌಸಲ್ಯ ಲೋಕೇಶ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಸದಸ್ಯರಾದ ಆರ್.ಎಸ್ ಮಹದೇವ್, ಮಲ್ಲಿಕಾರ್ಜುನ, ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಮತ್ತು ಸದಸ್ಯರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಪಿಡಬ್ಲ್ಯುಡಿ ಎಇಇ ಜಯಂತ್, ಜಿ.ಪಂ ಎಇಇ ಮಂಜುನಾಥ್, ಸಿಡಿಪಿಒ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಪ್ರಸನ್ನ, ಆರ್ ಡಬ್ಲು ಎಸ್ ಎಇಇ ಶಿವಕುಮಾರ್, ಶಿರಸ್ತೆದಾರ್ ವಿನೋದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ದಸಂಸ ಮುಖಂಡರು ಹಾಜರಿದ್ದರು.