
ಪಿರಿಯಾಪಟ್ಟಣ: ತಾಲ್ಲೂಕನ್ನು ಕೊರೊನಾ ಮುಕ್ತ ಮಾಡುವ ನಿಟ್ಟಿನಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿ ಮೇ.31ರೊಳಗೆ ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿ ವರದಿ ತಯಾರಿಸುವಂತೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು, ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಮನೆಗಳ ಸರ್ವೆ ಕಾರ್ಯ ನಡೆಸಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತಾಗಬೇಕು, ಜೂ.1 ರ ನಂತರ ತಾಲ್ಲೂಕಿನ ವಿವಿಧೆಡೆ ಖುದ್ದಾಗಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವೆ, ತಾಲ್ಲೂಕಿನಲ್ಲಿ ಸೋಂಕಿತರ ಮರಣ ಪ್ರಮಾಣ ಸಂಖ್ಯೆ ಇಳಿಮುಖವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾ ವಹಿಸಬೇಕು, ವ್ಯಾಕ್ಸಿನೇಷನ್ ಹಾಗೂ ಔಷಧ ಕೊರತೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ತಾಲ್ಲೂಕಿನಾದ್ಯಂತ ಸರ್ಕಾರದ ಮಾರ್ಗಸೂಚಿಯಂತೆ ಸಂಪೂರ್ಣ ವ್ಯಾಕ್ಸಿನೇಷನ್ ದೊರಕುವಂತೆ ಕರ್ತವ್ಯ ನಿರ್ವಹಿಸಬೇಕು, ಮನೆ ಮನೆ ಸರ್ವೆ ನಡೆಸಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರನ್ನು ಬಳಸಿಕೊಂಡರೆ ಸರ್ವೆ ಕಾರ್ಯ ಆದಷ್ಟು ಬೇಗ ನಡೆಯಲಿದ್ದು ಅವರ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಪರಿಕರಗಳ ಕಿಟ್ ಒದಗಿಸಲಾಗುತ್ತದೆ ಎಂದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ಸೋಂಕಿತರಿಗೆ ಸರ್ಕಾರದ ಮಾರ್ಗಸೂಚಿಯಂತೆ ಚಿಕಿತ್ಸೆ ದೊರಕಲು ವೈದ್ಯರು ಅಗತ್ಯ ಕ್ರಮ ಕೈಗೊಳ್ಳಬೇಕು, ಹಾಗೂ ಗ್ರಾಮಾಂತರ ಪ್ರದೇಶದ ಸೋಂಕಿತರಿಗೆ ಧೈರ್ಯ ಹೇಳುವ ಮೂಲಕ ಆತ್ಮಸ್ಥೈರ್ಯ ತುಂಬುವಂತೆ ತಿಳಿಸಿ ತಾಲ್ಲೂಕನ್ನು ಕೊರೊನಾ ಮುಕ್ತವಾಗಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜೆ.ಶ್ರೀನಿವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು, ಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್, ಹಾಗೂ ಔಷಧ ವಿತರಣೆ ಮಾಹಿತಿ ನೀಡಿದರು.
ಪಟ್ಟಣದ ಹೊರವಲಯದ ಕಗ್ಗುಂಡಿ ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕೊವಿಡ್ ಕೇರ್ ಸೆಂಟರ್ ಗೆ ಸಚಿವರು ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಮೈಸೂರು ಕೊಡಗು ಸಂಸದರಾದ ಪ್ರತಾಪ್ ಸಿಂಹ ಹಾಗು ಶಾಸಕ ಕೆ.ಕೆ ಮಹದೇವ್ ರವರು ಸೋಂಕಿತರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು,
ಈ ವೇಳೆ ಸೋಂಕಿತರು ಸ್ವಚ್ಚತೆ ಹಾಗೂ ಆಹಾರ ತ್ಯಾಜ್ಯ ವಿಲೇವಾರಿಯಲ್ಲಿ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು, ಈ ಸಂದರ್ಭ ಸಂಸದ ಪ್ರತಾಪ್ ಸಿಂಹ ಮಾತನಾಡಿ ಆಹಾರ ಪೊಟ್ಟಣಗಳ ತ್ಯಾಜ್ಯ ವಿಲೇವಾರಿಗೆ ನಿಗದಿತ ಸ್ಥಳದಲ್ಲಿ ಕಸದ ಬುಟ್ಟಿಯಿಡಲು ಹಾಗೂ ಸ್ನಾನದ ವ್ಯವಸ್ಥೆಗೆ ಬಿಸಿ ನೀರು ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿ ವೈದ್ಯರು ಪ್ರತಿನಿತ್ಯ ಮೂರು ಬಾರಿಯಾದರೂ ಸೋಂಕಿತರ ಯೋಗಕ್ಷೇಮ ವಿಚಾರಿಸಿ ಸೋಂಕು ಉಲ್ಬಣ ಗೊಂಡವರನ್ನು ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ರವಾನಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ತಹಸೀಲ್ದಾರ್ ಕೆ.ಚಂದ್ರಮೌಳಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಕೊವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರ ಮಾಹಿತಿ ಹಾಗೂ ತಾಲ್ಲೂಕಿನಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಂಚಾಯಿತಿವಾರು ಕೈಗೊಂಡಿರುವ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭ ಕಗ್ಗುಂಡಿ ಬಳಿಯ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ರಸಗೊಬ್ಬರ ದಾಸ್ತಾನು ಹಾಗೂ ವಿತರಣೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭ ಜಿ.ಪಂ ಸಿಇಒ ಯೋಗೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಡಿವೈಎಸ್ಪಿ ರವಿಪ್ರಸಾದ್, ಉಪವಿಭಾಗಾಧಿಕಾರಿ ವೀಣಾ, ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಜಗದೀಶ್, ಬಿ.ಆರ್ ಪ್ರದೀಪ್, ತಾಲ್ಲೂಕಿನ ವಿವಿಧೆಡೆಯ ನೋಡಲ್ ಅಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ ಹಾಗೂ ಕೊವಿಡ್ ಕೇರ್ ಸೆಂಟರ್ ವೈದ್ಯರು ಮತ್ತು ಸಿಬ್ಬಂದಿ, ತಾಲ್ಲೂಕು ಬಿಜೆಪಿ ಪದಾಧಿಕಾರಿಗಳು ಹಾಜರಿದ್ದರು.