
ಪಿರಿಯಾಪಟ್ಟಣ: ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಸಂಚಾರಿ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು, ವೈದ್ಯರು ಮತ್ತು ಸಿಬ್ಬಂದಿ ತಂಡ ತಾಲ್ಲೂಕಿನ ವಿವಿಧೆಡೆಯ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ ಸೋಂಕಿತರು, ಪ್ರಾರ್ಥಮಿಕ ಸಂಪರ್ಕದಲ್ಲಿದ್ದವರು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ನಡೆಸಿದ ಮನೆ ಮನೆ ಸರ್ವೆ ವೇಳೆ ಅನಾರೋಗ್ಯದ ಲಕ್ಷಣ ಉಳ್ಳವರಿಗೆ ಸ್ಥಳದಲ್ಲಿಯೇ ರ್ಯಾಟ್ ಟೆಸ್ಟ್ ಹಾಗೂ ಆರ್ಟಿಪಿಸಿಆರ್ ಪರೀಕ್ಷೆ ನಡೆಸುವವರು, ಪರೀಕ್ಷೆಗೊಳಪಟ್ಟವರು ಫಲಿತಾಂಶ ಬರುವವರೆಗೆ ಹೋಮ್ ಐಸೋಲೇಶನ್ ನಲ್ಲಿ ಇರುವಂತೆ ತಿಳಿಸಿ ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಆಯೋಜಿಸಿರುವ ನೂತನ ಕಾರ್ಯಕ್ರಮ ಸದ್ಬಳಕೆಯಾಗಲು ಸಾರ್ವಜನಿಕರು ಸಹಕರಿಸುವಂತೆ ಕೋರಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಸಂಚಾರಿ ವೈದ್ಯರು ಮತ್ತು ಸಿಬ್ಬಂದಿ ತಂಡ ಪ್ರತಿದಿನ ನಿಗದಿತ ಹಳ್ಳಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಾರೆ, ಮುಂದಿನ ಹತ್ತು ದಿನಗಳವರೆಗೆ ತಾಲ್ಲೂಕಿನ ಇನ್ನೂರಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಲಿದ್ದು ಈ ವೇಳೆ ಸಾರ್ವಜನಿಕರು ನಿರ್ಲಕ್ಷಿಸದೆ ಸೋಂಕಿನ ಲಕ್ಷಣಗಳಿದ್ದರೆ ತಪಾಸಣೆ ನಡೆಸಿ ಆರೋಗ್ಯ ಇಲಾಖೆ ನೀಡುವ ಸಲಹೆ ಪಾಲಿಸುವಂತೆ ತಿಳಿಸಿದರು.
ಈ ಸಂದರ್ಭ ತಹಸೀಲ್ದಾರ್ ಕೆ.ಚಂದ್ರಮೌಳಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ
ಡಾ.ಜೆ ಶ್ರೀನಿವಾಸ್, ಬಿಇಒ ವೈ.ಕೆ ತಿಮ್ಮೆಗೌಡ, ಸಿಡಿಪಿಒ ಕುಮಾರ್, ಜಿ.ಪಂ ಎಇಇ ಮಂಜುನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್, ಸಹಾಯಕ ಅಧಿಕಾರಿಗಳಾದ ಮಹೇಶ್, ವಿಕಾಸ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಸಾರ್ವಜನಿಕ ಆಸ್ಪತ್ರೆ ಪ್ರಥಮ ದರ್ಜೆ ಸಹಾಯಕ ಅಣ್ಣೇಗೌಡ, ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.