
ಕಣಗಾಲು, ಹಲಗನಹಳ್ಳಿ, ಬೆಟ್ಟದಪುರ ಗ್ರಾ.ಪಂ ಗಳಿಗೆ ಭೇಟಿ ನೀಡಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್ ರವರು ಕೊರೊನಾ ಸೋಂಕು ಇಡೀ ವಿಶ್ವಕ್ಕೆ ತಗುಲಿ ಸೋಂಕು ತಡೆಗಟ್ಟಲು ವಿಶ್ವದಾದ್ಯಂತ ಹೋರಾಟ ನಡೆಸಲಾಗುತ್ತಿದೆ, ಸೋಂಕಿನ ಲಕ್ಷಣ ಉಳ್ಳವರು ವಿಷಯ ಮುಚ್ಚಿಟ್ಟರೆ ಅಪಾಯವೇ ಹೆಚ್ಚು, ಪ್ರಾರಂಭಿಕ ಹಂತದಲ್ಲಿಯೇ ವೈದ್ಯರ ಸಲಹೆಯಂತೆ ಔಷಧಿ ಪಡೆಯಬೇಕು, ಸೋಂಕು ಉಲ್ಬಣಗೊಂಡ ಸಂದರ್ಭ ಚಿಕಿತ್ಸೆ ಪಡೆಯುವಾಗ ಸಾವು ಹೆಚ್ಚಾಗುತ್ತಿವೆ, ಜೂನ್ ತಿಂಗಳ ಕೊನೆಯ ವೇಳೆಗೆ ಸರ್ಕಾರ ನಿಗದಿಪಡಿಸಿದ ವಯೋಮಿತಿಯ ಎಲ್ಲರಿಗೂ ಲಸಿಕೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು, ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ, ನಿಗದಿತ ಸಮಯದೊಳಗೆ ತಾಲ್ಲೂಕಿನಲ್ಲಿ ಮನೆ ಮನೆ ಸರ್ವೆ ಕಾರ್ಯ ಮುಗಿಸಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕೊರೊನಾ ಸೋಂಕು ತಡೆಗಟ್ಟಲು ಆರೋಗ್ಯ, ಆರಕ್ಷಕ, ಕಂದಾಯ, ಗ್ರಾ.ಪಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದು ಸಾರ್ವಜನಿಕರು ಅವರಿಗೆ ಸಹಕರಿಸುವಂತೆ ಕೋರಿದರು.

ಶಾಸಕ ಕೆ.ಮಹದೇವ್ ಮಾತನಾಡಿ ಕೊರೊನಾ ಮುಕ್ತ ತಾಲ್ಲೂಕನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಜೀವದ ಹಂಗು ತೊರೆದು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದು ನಾವೆಲ್ಲರೂ ಅವರನ್ನು ಗೌರವಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸಿ ಸೋಂಕು ನಿಯಂತ್ರಣಕ್ಕೆ ತರಲು ಸಹಕಾರ ನೀಡಬೇಕು, ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಗ್ರಾ.ಪಂ ಗಳಿಗೆ ಭೇಟಿ ನೀಡಿ ಕೊರೋನಾ ಸೋಂಕು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದು ಸಾರ್ವಜನಿಕರು ಸೋಂಕಿನ ಬಗ್ಗೆ ನಿರ್ಲಕ್ಷ್ಯ ತಾಳದೆ ಎಚ್ಚರಿಕೆಯಿಂದಿರುವಂತೆ ಕೋರಿದರು.

ತಾಪಂ ಇಒ ಸಿ.ಆರ್ ಕೃಷ್ಣಕುಮಾರ್ ತಾಲ್ಲೂಕಿನಾದ್ಯಂತ ಗ್ರಾ.ಪಂ ವತಿಯಿಂದ ಸೋಂಕು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ತಾಲ್ಲೂಕಿನಾದ್ಯಂತ ಸರ್ಕಾರ ನಿಗದಿಪಡಿಸಿದವರಿಗೆ ಲಸಿಕೆ ವಿತರಣೆ ಹಾಗೂ ಕೊರೊನಾ ಸೋಂಕು ಪರೀಕ್ಷೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಸೋಂಕಿನಿಂದ ಮೃತಪಟ್ಟ ಮನೆಗೆ ಭೇಟಿ: ಸಚಿವರಾದ ಎಸ್.ಟಿ ಸೋಮಶೇಖರ್, ಶಾಸಕರಾದ ಕೆ.ಮಹದೇವ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೊರೊನಾ ಸೋಂಕಿನಿಂದ ದಂಪತಿಗಳು ಮೃತಪಟ್ಟ ಕಣಗಾಲು ಗ್ರಾಮದ ಪಿಎಸಿಸಿಎಸ್ ಸಿಇಒ ತಮ್ಮೇಗೌಡ ಅವರ ಮನೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ತಮ್ಮೇಗೌಡ ಅವರ ಕುಟುಂಬಸ್ಥರು ತಾಲ್ಲೂಕು ಆಡಳಿತ ವತಿಯಿಂದ ಇದುವರೆಗೂ ಯಾವುದೇ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ನಮ್ಮ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದಾಗ ಸಚಿವರು ಪ್ರತಿಕ್ರಿಯಿಸಿ ತಮ್ಮೇಗೌಡ ಅವರ ಮಗಳಿಗೆ ಸಹಕಾರ ಸಂಸ್ಥೆಯಲ್ಲಿ ಉದ್ಯೋಗ ನೀಡುವುದಾಗಿ ಮತ್ತು ಅವರ ಅಳಿಯನಿಗೆ ಪಿರಿಯಾಪಟ್ಟಣ ಸಾರಿಗೆ ಘಟಕಕ್ಕೆ ವರ್ಗಾಯಿಸಿ ಕೊಡುವುದಾಗಿ ಭರವಸೆ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭ ಉಪ ವಿಭಾಗಾಧಿಕಾರಿ ವೀಣಾ, ತಹಸೀಲ್ದಾರ್ ಕೆ.ಚಂದ್ರಮೌಳಿ, ಎಎಸ್ಪಿ ಶಿವಕುಮಾರ್, ಡಿವೈಎಸ್ಪಿ ರವಿಪ್ರಸಾದ್, ಇನ್ಸ್ ಪೆಕ್ಟರ್ ಜಗದೀಶ್, ಕಣಗಾಲು ಗ್ರಾ.ಪಂ ಅಧ್ಯಕ್ಷೆ ಚಂದ್ರಮ್ಮ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾದ ಎಲ್.ಆರ್ ಮಹದೇವಸ್ವಾಮಿ, ಪಣೀಶ್, ಹೇಮಂತ್ ಕುಮಾರ್, ಮಹದೇವಯ್ಯ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಕೆಡಬ್ಲ್ಯುಎಸ್ಎಸ್ ಬಿ ನಿರ್ದೇಶಕ ಆರ್.ಟಿ ಸತೀಶ್, ಪುರಸಭಾ ನಾಮನಿರ್ದೇಶಿತ ಸದಸ್ಯರಾದ ನಳಿನಿ, ಪ್ರಸಾದ್, ಶಿವರಾಮೇಗೌಡ, ವಿವಿಧ ಇಲಾಖೆ ಅಧಿಕಾರಿಗಳು, ಕಣಗಾಲು, ಹಲಗನಹಳ್ಳಿ, ಬೆಟ್ಟದಪುರ ಗ್ರಾ.ಪಂ ಆಡಳಿತ ವರ್ಗ ಮತ್ತು ಸಿಬ್ಬಂದಿ, ಬಿಜೆಪಿ ಪದಾಧಿಕಾರಿಗಳು ಹಾಜರಿದ್ದರು.






