
ಈ ವೇಳೆ ಶಾಸಕ ಕೆ.ಮಹದೇವ್ ಅವರು ಮಾತನಾಡಿ ರಾಜ್ಯದ ಜನತೆ ಕೊರೊನಾದಂತಹ ಸಂಕಷ್ಟ ಸಂದರ್ಭದಲ್ಲಿದ್ದಾಗ ಅವರ ನೆರವಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ, ಸೇವಾ ಮನೋಭಾವದ ಮೂಲಕ ರಾಜ್ಯಾದ್ಯಂತ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಸರ್ಕಾರದ ಜತೆ ಕೈಜೋಡಿಸಿ ನೊಂದವರಿಗೆ ಸಹಾಯ ಮಾಡಿ ಮಾದರಿಯಾಗಿದ್ದಾರೆ ಎಂದರು.
ಸಂಸ್ಥೆಯ ಕರಾವಳಿ ಪ್ರಾದೇಶಿಕ ವಿಭಾಗದ ನಿರ್ದೇಶಕ ವಸಂತ್ ಸಾಲಿಯಾನ್ ಅವರು ಮಾತನಾಡಿ ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸೋಂಕಿತರ ಆರೈಕೆಗೆ ಸಂಸ್ಥೆಯು ಸಹಾಯ ಮಾಡುವ ಉದ್ದೇಶದಿಂದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಹಲವೆಡೆಯ ಆಸ್ಪತ್ರೆಗಳಿಗೆ 2.5 ಕೋಟಿ ವೆಚ್ಚದ 100 ಟನ್ ಆಕ್ಸಿಜನ್ ಪೂರೈಕೆ, ನಾಲ್ಕು ಸ್ಥಳಗಳಲ್ಲಿ ಕೊವಿಡ್ ಕೇರ್ ಸೆಂಟರ್ ಸ್ಥಾಪನೆ, ಮುನ್ನೂರಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸನ್ ಟ್ರೇಟರ್ ಹಾಗೂ ಇಪ್ಪತ್ತಕ್ಕೂ ಹೆಚ್ಚು ವೆಂಟಿಲೇಟರ್ ವಿತರಿಸಿ ಸಾಮಾನ್ಯ ಜನರ ಸಹಕಾರಕ್ಕೆ ಮುಂದಾಗಿದೆ ಎಂದರು.
ಸಂಸ್ಥೆಯ ಕೊಡಗು ಜಿಲ್ಲಾ ನಿರ್ದೇಶಕ ಡಾ.ಯೋಗೀಶ್ ಮಾತನಾಡಿ ರಾಜ್ಯದ ಜನತೆ ಕೊರೊನಾ ಸಂಕಷ್ಟದಲ್ಲಿರುವುದನ್ನು ಮನಗಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಿದ ಸಾಲದ ಹಣದ ಮರುಪಾವತಿಗೆ ಮುಂಬರುವ ಡಿಸೆಂಬರ್ ತಿಂಗಳವರೆಗೆ ಕಾಲಾವಕಾಶ ನೀಡಿರುವ ಬಗ್ಗೆ ಈಗಾಗಲೇ ಸಂಸ್ಥೆಯ ವತಿಯಿಂದ ಮಾಹಿತಿ ನೀಡಲಾಗಿದೆ ಎಂದರು.
ಈ ಸಂದರ್ಭ ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಮಾಜಿ ಸದಸ್ಯ ಎ.ಟಿ ರಂಗಸ್ವಾಮಿ, ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಕೆ.ಆರ್ ಪ್ರಕಾಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಶೆಟ್ಟಿ, ಕೃಷಿ ಅಧಿಕಾರಿ ಉಮೇಶ್, ವಿವಿಧೆಡೆಯ ಮೇಲ್ವಿಚಾರಕರು ಹಾಜರಿದ್ದರು.