ಜಿಲ್ಲಾ ಪಂಚಾಯಿತಿ ಚುನಾವಣಾ ಮೀಸಲಾತಿಯಲ್ಲಿ ಹಿಂದುಳಿದವರ್ಗಕ್ಕೆ ಅನ್ಯಾಯ – MLA K.Mahadev 05/07/2021

ಪಿರಿಯಾಪಟ್ಟಣ: ಮುಂಬರುವ ಜಿ.ಪಂ ಚುನಾವಣೆಗೆ ತಾಲ್ಲೂಕಿನ ಕ್ಷೇತ್ರಗಳಿಗೆ ನಿಗದಿಪಡಿಸಿರುವ ಮೀಸಲಾತಿ ಅವೈಜ್ಞಾನಿಕವಾಗಿದ್ದು ರಾಜ್ಯ ಚುನಾವಣಾ ಆಯೋಗ ತುರ್ತಾಗಿ ಮೀಸಲಾತಿ ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕ ಕೆ.ಮಹದೇವ್ ಆಗ್ರಹಿಸಿದರು.
ಕ್ಷೇತ್ರವಾರು ಮರುವಿಂಗಡನೆ ನಂತರ ರಾಜ್ಯ ಚುನಾವಣಾ ಆಯೋಗ ಜು.1 ರಂದು ಜಿ.ಪಂ ಮತ್ತು ತಾ.ಪಂ ಚುನಾವಣೆ ಮೀಸಲಾತಿ ಪ್ರಕಟ ಮಾಡಿದ್ದು ಇದರಲ್ಲಿ ತಾಲ್ಲೂಕಿನ ಏಳು ಜಿ.ಪಂ ಕ್ಷೇತ್ರಗಳಲ್ಲಿ ಯಾವುದೇ ಕ್ಷೇತ್ರದಲ್ಲಿಯೂ ಹಿಂದುಳಿದ ವರ್ಗಕ್ಕೆ ಮೀಸಲಾತಿ ನಿಗದಿಪಡಿಸದೆ ಕಡೆಗಣಿಸಲಾಗಿದೆ ಎಂದು ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸ್ವಾತಂತ್ರ್ಯ ಬಂದು ಹಲವು ವರ್ಷಗಳ ನಂತರ 1995 ರಲ್ಲಿ ಹೆಚ್.ಡಿ ದೇವೆಗೌಡರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳಿಗೂ ಜನಸೇವೆ ಮಾಡಲು ಅನುವು ಮಾಡಿಕೊಡುವ ಸಲುವಾಗಿ ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬಲು ಮೀಸಲಾತಿ ಜಾರಿಗೆ ತಂದು ಅಂದಿನಿಂದ ಇಂದಿನವರೆಗೂ ಹಿಂದುಳಿದ ವರ್ಗಗಳನ್ನು ಕಡೆಗಣಿಸಿರಲಿಲ್ಲ, ಹಿಂದುಳಿದ ವರ್ಗಗಳಿಗೂ ಅವಕಾಶ ಕೊಡಬೇಕು ಎಂಬ ಅವರ ಕನಸು ಈ ಬಾರಿಯ ಜಿ.ಪಂ ಚುನಾವಣಾ ತಾಲ್ಲೂಕಿನ ಮೀಸಲಾತಿಯಿಂದ ಭಂಗ ಮಾಡಿದಂತಾಗಿದ್ದು ಇದಕ್ಕೆ ಚುನಾವಣಾ ಆಯೋಗ ಅವಕಾಶ ಕೊಡಬಾರದು, ಈಗಾಗಲೇ ಆಯೋಗಕ್ಕೂ ಪತ್ರ ಬರೆದು ಮೀಸಲಾತಿ ಸರಿಪಡಿಸುವಂತೆ ಮನವಿ ಮಾಡಲಾಗಿದೆ, ಬಿಸಿಎಂ ಎ ವರ್ಗದಲ್ಲಿ ಹಿಂದುಳಿದ ಮತ್ತು ಅತಿ ಹಿಂದುಳಿದ ಸಮಾಜಗಳಾದ ನಯನ ಕ್ಷತ್ರಿಯ, ಸವಿತಾ, ಮಡಿವಾಳ, ಉಪ್ಪಾರ, ಕುರುಬ ಸೇರಿದಂತೆ ಹಲವು ವರ್ಗಗಳ ಸ್ಪರ್ಧೆಗೆ ಅವಕಾಶವಿದ್ದು ಪ್ರಸ್ತುತ ಮೀಸಲಾತಿಯಿಂದ ಅವರ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆಯಾಗಿದೆ, ಚುನಾವಣಾ ಆಯೋಗ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಮಾಡಬೇಕು ಅಥವಾ ಜಿಲ್ಲಾಧಿಕಾರಿಯಿಂದ ವರದಿ ತರಿಸಿ ಮೀಸಲಾತಿ ಘೋಷಿಸಬೇಕು, ಎಲ್ಲೋ ಕುಳಿತು ಯಾವುದನ್ನೂ ಯೋಚಿಸದೆ ಅವೈಜ್ಞಾನಿಕವಾಗಿ ಘೋಷಣೆ ಮಾಡಿರುವುದನ್ನು ನಾನು ಖಂಡಿಸುತ್ತೇನೆ, ಮುಂದಿನ ದಿನಗಳಲ್ಲಿ ಇದು ಸರಿಪಡಿಸದಿದ್ದರೆ ಹಿಂದುಳಿದವರು ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಸಹ ಸೃಷ್ಟಿಯಾಗಬಹುದು ಎಂದು ಎಚ್ಚರಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top