ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು, ಹಿಟ್ನಹಳ್ಳಿ, ಬಿಲ್ಲಹಳ್ಳಿ, ಆಯತನಹಳ್ಳಿ, ಸೀಗೂರು, ಹರದೂರು, ಗ್ರಾಮಗಳಿಗೆ ಬುಧವಾರ ಭೇಟಿ ನೀಡಿದ ಶಾಸಕರು ಗ್ರಾಮದ ಕುಂದುಕೊರತೆಗಳ ಬಗ್ಗೆ ಗ್ರಾಮಸ್ಥರುಗಳಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.
ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳ ಪ್ರವಾಸ ವೇಳೆ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದು ಸಮಸ್ಯೆಗಳ ನಿವಾರಣೆಗಾಗಿ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ದಿಯ ಕ್ರಿಯಾಯೋಜನೆ ತಯಾರಿಸಿ ಸಂಬAಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಅನುದಾನ ತಂದು ಗ್ರಾಮಾಂತರ ಪ್ರದೇಶಗಳ ಅಭಿವೃದ್ದಿಗೆ ಒತ್ತು ನೀಡುವ ಭರವಸೆ ನೀಡಿದರು.
ಇದೇ ಸಂದರ್ಭ ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ಆರ್ಎಂಎಸ್ಎ ಯೋಜನೆಯಡಿ ನಿರ್ಮಾಣಗೊಂಡಿರುವ ನೂತನ ಶಾಲಾ ಕಟ್ಟಡದ ಕೊಠಡಿಗಳ ಉದ್ಘಾಟನೆ ನೆರವೇರಿಸಿದರು. ತಾಲ್ಲೂಕಿನ ಬಿಲ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಪರಿಶಿಷ್ಟ ಜನಾಂಗದ ಕಾಲೋನಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಕೊರತೆ ನಿವಾರಣೆ ಹಾಗೂ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸುವ ಭರವಸೆ ನೀಡಿದರು. ಗ್ರಾಮದ ಜೆಸಿಬಿ ಮಹದೇವಪ್ಪ ನವರ ಮನೆಗೆ ಭೇಟಿ ನೀಡಿ ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ದ್ರಾಕ್ಷಾಯಿಣಿ ರವರಿಗೆ ಸಾಂತ್ವನ ಹೇಳಿ ಸರ್ಕಾರಕ್ಕೆ ಚಿಕಿತ್ಸಾ ವೆಚ್ಚ ಭರಿಸುವಂತೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಗ್ರಾಮ ಸಂದರ್ಶನ ವೇಳೆ ರಸ್ತೆ ಅಭಿವೃದ್ದಿ, ಶಾಲಾ ದುರಸ್ತಿ ಹಾಗೂ ತಡೆಗೋಡೆ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಕಂಬ ಬದಲಾವಣೆ, ಕೆರೆಗೆ ಸೋಪಾನ ಕಟ್ಟೆ ನಿರ್ಮಾಣ, ಸೇರಿದಂತೆ ಹಲವು ಮನವಿಗಳನ್ನು ಗ್ರಾಮಸ್ಥರುಗಳಿಂದ ಶಾಸಕ ಕೆ.ಮಹದೇವ್ ಸ್ವೀಕರಿಸಿ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಆದೇಶಿಸಿದರು.
ಈ ಸಂದರ್ಭ ಹಿಟ್ನೆಹೆಬ್ಬಾಗಿಲು ಪಿಎಸಿಸಿಎಸ್ ಅಧ್ಯಕ್ಷ ಕಗ್ಗುಂಡಿ ಹರೀಶ್, ಮಾಜಿ ಜಿ.ಪಂ.ಸದಸ್ಯ ಶಿವಣ್ಣ, ಗ್ರಾ.ಪಂ.ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ಕುಮಾರಿ, ಮಲ್ಲಿಕ, ಮೀನಾಕ್ಷಿ, ಗೀತಾ ಭೀಮಯ್ಯ, ಪರಮೇಶ್, ಅನಿಲ್ಕುಮಾರ್, ಕಾಮರಾಜ್, ಧರ್ಮ, ಪುರಸಭಾ ಸದಸ್ಯರಾದ ಪಿ.ಎನ್.ವಿನೋದ್, ನಿರಂಜನ್, ಮುಖಂಡರಾದ ಶಿವರುದ್ರಪ್ಪ, ಚಂದ್ರಶೇಖರಯ್ಯ, ಲಕ್ಕಯ್ಯ, ಸ್ವಾಮಿ, ಮಹದೇವ್, ಮುತ್ತುರಾಜ್, ಶಂಕರ್, ರವಿಕುಮಾರ್, ಕಾಂತರಾಜ್, ಸೀಗೂರು ವಿಜಯಕುಮಾರ್, ವೀರಭದ್ರಪ್ಪ, ಶಿವಕುಮಾರ್, ಪಿಡಿಒ ದಮಯಂತಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.