
ಪಿರಿಯಾಪಟ್ಟಣ: ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಪಕ್ಷಕ್ಕೆ ಬರುವವರಿಗೆ ಸದಾ ಸ್ವಾಗತ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. ಪಟ್ಟಣದ ಸ್ವಗೃಹದಲ್ಲಿ ತಾಲ್ಲೂಕಿನ ಚಿಕ್ಕನೇರಳೆ ಸಂತೆಮಾಳ ಗ್ರಾಮದ ಮುಜಮ್ಮಿಲ್ ಮತ್ತು ಸಂಗಡಿಗರನ್ನು ಜೆಡಿಎಸ್ ರಾಜ್ಯ ಸಮಿತಿ ಸದಸ್ಯೆ ನಜ್ಮಾ ನಜೀರ್ ನೇತೃತ್ವದಲ್ಲಿ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು, ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ನೆಲೆ ಇದ್ದು ಪ್ರತಿ ಹಳ್ಳಿಗಳಲ್ಲಿಯೂ ಪ್ರಾಮಾಣಿಕ ಕಾರ್ಯಕರ್ತರಿದ್ದಾರೆ, ಈ ಹಿಂದಿನ ದಿನಗಳಲ್ಲಿ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ತಾಲ್ಲೂಕಿನ ಅಭಿವೃದ್ಧಿ ಹಿತದೃಷ್ಟಿಯಿಂದ ಸಂಬಂಧಿಸಿದವರ ಬಳಿ ಅನುದಾನ ತಂದು ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು, ಪ್ರಸ್ತುತ ಶಾಸಕನಾಗಿರುವುದರಿಂದ ಮತದಾರರ ವಿಶ್ವಾಸಕ್ಕೆ ಚ್ಯುತಿ ಬರದ ಹಾಗೆ ಹಂತಹಂತವಾಗಿ ತಾಲ್ಲೂಕಿನ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ, ಪಕ್ಷದ ವರಿಷ್ಠರು ಹಾಗೂ ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಲವರು ಬಿಜೆಪಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರುತ್ತಿರುವುದು ಸಂತಸದ ಬೆಳವಣಿಗೆ ಎಂದರು.
ಜೆಡಿಎಸ್ ರಾಜ್ಯ ಸಮಿತಿ ಸದಸ್ಯೆ ನಜ್ಮಾ ನಜೀರ್ ಚಿಕ್ಕನೇರಳೆ ಮಾತನಾಡಿ ತಾಲ್ಲೂಕಿನಲ್ಲಿ ಈ ಹಿಂದೆ ಎಂದೂ ಕಾಣದ ಅಭಿವೃದ್ದಿಯನ್ನು ಶಾಸಕ ಕೆ.ಮಹದೇವ್ ಮಾಡಿ ತೋರಿಸುತ್ತಿರುವುದರಿಂದ ತಾಲ್ಲೂಕಿನಾದ್ಯಂತ ಬದಲಾವಣೆಯ ಪರ್ವ ಏರ್ಪಟ್ಟು ಹಲವರು ಜೆಡಿಎಸ್ ಸೇರುತ್ತಿರುವುದು ಪಕ್ಷಕ್ಕೆ ಭದ್ರ ಬುನಾದಿ ಆಗುತ್ತಿದೆ, ಮುಂಬರುವ ಜಿ.ಪಂ ಹಾಗು ತಾ.ಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಕಾರ್ಯಕರ್ತರು ಸಜ್ಜಾಗುವಂತೆ ಕೋರಿದರು.
ಈ ಸಂದರ್ಭ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ಚಿಕ್ಕನೇರಳೆ ಗ್ರಾ.ಪಂ ಉಪಾಧ್ಯಕ್ಷ ಎಸ್ರಿಫ಼್ ಪಾಷ, ಸದಸ್ಯ ಕುಬೇರ್, ಮುಖಂಡರಾದ ಶಫ಼ೀ,ಖಾನ್, ಬಹದ್ದೂರ್ ಹಾಜರಿದ್ದರು.