ಪಿರಿಯಾಪಟ್ಟಣ: ಪಟ್ಟಣದ ಅಭಿವೃದ್ಧಿಗೆ ಕೊಟ್ಟ ಭರವಸೆಗಳನ್ನು ಹಂತಹಂತವಾಗಿ ಜಾರಿಗೆ ತರಲಾಗುತ್ತಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು. 11/09/2021

ಪಟ್ಟಣದ ಮೇದರ ಬ್ಲಾಕ್ ಬಡಾವಣೆಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 25 ಲಕ್ಷ ವೆಚ್ಚದ ಮೂಲಭೂತ ಸೌಲಭ್ಯ ಒದಗಿಸುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನಾನು ಪಟ್ಟಣ ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪಟ್ಟಣದ ಪ್ರತಿ ಮನೆಗೂ ಕಾವೇರಿ ಕುಡಿಯುವ ನೀರು ಪೂರೈಸಲು ಕ್ರಿಯಾಯೋಜನೆ ಮಾಡಿ ಅನುದಾನ ಮಂಜೂರು ಮಾಡಿಸಲಾಗಿತ್ತು ನನ್ನ ನಂತರ ಬಂದ ಆಡಳಿತ ಮಂಡಳಿ ನಿರ್ಲಕ್ಷ್ಯತನದಿಂದಾಗಿ ಕಾಮಗಾರಿಗೆ ಹಿನ್ನೆಡೆಯುಂಟಾಗಿದೆ, 115 ಕೋಟಿ ವೆಚ್ಚದಲ್ಲಿ ಪಟ್ಟಣದ ಪ್ರತಿಯೊಂದು ಮನೆಗೂ ಕಾವೇರಿ ಕುಡಿಯುವ ನೀರು ಸರಬರಾಜು ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದ್ದು ಮುಂದಿನ ಐವತ್ತು ವರ್ಷಗಳ ಕಾಲ ಸಮರ್ಪಕವಾಗಿ ನೀರು ಪೂರೈಕೆಯ ಯೋಜನೆ ರೂಪಿಸಲಾಗಿದೆ, ಪುರಸಭೆ ಚುನಾವಣೆಯಲ್ಲಿ ಮತದಾರರಿಗೆ ನೀಡಿದ ಭರವಸೆಯಂತೆ ಪುರಸಭೆ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ಸುಮಾರು 2000 ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದ್ದು ನಿವೇಶನಕ್ಕಾಗಿ ಸೂಕ್ತ ಜಾಗವನ್ನು ಗುರುತಿಸುವ ಕೆಲಸ ನಡೆಯುತ್ತಿದೆ, ಪಟ್ಟಣ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ನಗರಾಭಿವೃದ್ಧಿ ಇಲಾಖೆಗೆ 20 ಕೋಟಿ ರೂ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು ಆದಷ್ಟು ಶೀಘ್ರದಲ್ಲಿ ಅನುದಾನ ದೊರಕುವ ಭರವಸೆಯಿದೆ,  ಇನ್ನು ಹದಿನೈದು ದಿನಗಳಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದ್ದು, ತಾಲ್ಲೂಕು ಕಚೇರಿ ಜಂಕ್ಷನ್, ಸಾರ್ವಜನಿಕ ಆಸ್ಪತ್ರೆ ಮತ್ತು ಉಪ್ಪಾರಗೇರಿ ಜಂಕ್ಷನ್ ಬಳಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ ಶಾಸಕರ ಪರಿಶ್ರಮದಿಂದಾಗಿ ಪಟ್ಟಣ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಲಭಿಸುತ್ತಿದೆ, ಹತ್ತು ವರ್ಷಗಳ ಹಿಂದೆ ಅತ್ಯಂತ ಹಿಂದುಳಿದಿದ್ದ ಮೇದರ ಬ್ಲಾಕ್ ಬಡಾವಣೆ ಇದೀಗ ಉತ್ತಮ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹೊಂದಲು ಶಾಸಕರ ಪರಿಶ್ರಮ ಕಾರಣ ಎಂದರು.

ಈ ಸಂದರ್ಭ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್ ವಿನೋದ್, ಸದಸ್ಯರಾದ ಪಿ.ಸಿ.ಕೃಷ್ಣ, ಪ್ರಕಾಶ್ ಸಿಂಗ್, ರವಿ, ಭಾರತಿ, ನಳಿನಿ, ಮುಖಂಡರಾದ ಉಮೇಶ್, ಮುರಳಿ, ತಿಮ್ಮನಾಯಕ, ಚಂದ್ರು, ಕುಮಾರ್, ಇಲಿಯಾಸ್ ಅಹ್ಮದ್, ಮುಶೀರ್ ಖಾನ್ ಮತ್ತು ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಮತ್ತಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top