ಪುರಸಭೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕ ಕೆಲಸಕ್ಕೆ ನಿರ್ಲಕ್ಷö್ಯತ ತೋರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕ ಕೆ.ಮಹದೇವ್ ಸೋಮವಾರ ಪುರಸಭಾ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಿಸಿ ಮುಟ್ಟಿಸಿದರು.
ಶಾಸಕರ ಭೇಟಿ ವೇಳೆ ಕೆಲ ನೌಕರರು ಗೈರು ಆಗಿದ್ದನ್ನು ಕಂಡು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣದ ಪುರಸಭೆಯ ವಾಣಿಜ್ಯ ಮಳಿಗೆಗಳಿಂದ ಪುರಸಭೆಗೆ ಪ್ರತಿ ವರ್ಷ ರೂ.30 ಲಕ್ಷಕ್ಕೂ ಹೆಚ್ಚು ಆಧಾಯ ಬಾಡಿಗೆ ರೂಪದಲ್ಲಿ ಬರಬೇಕಿತ್ತು ಆದರೆ ಕೆಲವು ವಾಣಿಜ್ಯ ಮಳಿಗೆಗಳಲ್ಲಿ ವಹಿವಾಟು ನಡೆಸುತ್ತಿರುವ ಬಾಡಿಗೆದಾರರು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದಾಗ ಆಕ್ರೋಶಗೊಂಡ ಶಾಸಕರು ವರ್ಷಗಟ್ಟಲೇ ಬಾಡಿಗೆ ಹಣವನ್ನು ನೀಡದೆ ಬಾಕಿ ಉಳಿಸಿಕೊಂಡಿರುವ ಮಳಿಗೆಗಳಿಗೆ ಈ ಕೂಡಲೇ ಬೀಗ ಹಾಕುವಂತೆ ಅಧಿಕಾರಿಗೆ ಸೂಚಿಸಿದರು. ಪುರಸಭೆಗೆ ತೆರಿಗೆ ವಸೂಲಾತಿಯಲ್ಲಿ ಹಿಂದುಳಿದಿರುವ ಹಾಗೂ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ವಿಫಲವಾಗಿರುವ ಪುರಸಭಾ ಮುಖ್ಯಾಧಿಕಾರಿ ಬೇರೆಡೆಗೆ ವರ್ಗಾಹಿಸಿಕೊಂಡು ತೆರಳುವಂತೆ ಎಚ್ಚರಿಸಿದರು. ಕಚೇರಿಗೆ ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಬಂದು ಸಾರ್ವಜನಿಕರ ಕೆಲಸಗಳನ್ನು ಮಾಡದಿದ್ದಲ್ಲಿ ಅಂತಹ ಸಿಬ್ಬಂದಿಗಳು ಪುರಸಭೆಗೆ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಅನಧಿಕೃತ ಕೋಳಿ ಮಾಂಸ ಮಾರಾಟದ ಅಂಗಡಿಗಳಿಗೆ ಅಧಿಕಾರಿಗಳು ಬೀಗಮುದ್ರೆ ಒತ್ತಿದ್ದರೂ ಸಹ ಕೆಲವು ಪುರಸಭಾ ಸದಸ್ಯರ ಕುಮ್ಮಕ್ಕಿನಿಂದ ರಾತ್ರೋರಾತ್ರಿ ಬೀಗತೆರೆದು ರಾಜಾರೋಷವಾಗಿ ವಹಿವಾಟು ನಡೆಸುತ್ತಿದ್ದಾರೆ ಎಂದು ಪುರಸಭಾ ಸದಸ್ಯ ಕೆ.ಮಹೇಶ್ ಆರೋಪಿಸಿದರು.
ಪಟ್ಟಣದಲ್ಲಿ ಕುಡಿಯುವ ನೀರಿನ ಪೂರೈಕೆ, ಸ್ವಚ್ಚತೆ, ಕಂದಾಯ ವಸೂಲಾತಿ, ಖಾತೆ ವರ್ಗಾವಣೆ ಸೇರಿದಂತೆ ಮತ್ತಿತರ ಕೆಲಸಗಳಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದ್ದು ಹಲವರು ತಮ್ಮ ಬಳಿ ಬಂದು ದೂರು ನೀಡುತ್ತಿದ್ದು ಈ ಬಗ್ಗೆ ಪುರಸಭೆ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಡಿ.ಪುಟ್ಟರಾಜು, ಪರಿಸರ ಇಂಜನೀಯರ್ ಪ್ರಸನ್ನ, ಕಂದಾಯ ನಿರೀಕ್ಷಕ ಸಂದೀಪ್ ಪುರಸಭಾ ಸದಸ್ಯ ಪಿ.ಸಿ.ಕೃಷ್ಣ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.