
ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ಜೆಡಿಎಸ್ ಪಕ್ಷ ಸಂಘಟನೆ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನತಾ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು, ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಸಮಿತಿ ರಚಿಸುವುದರ ಜೊತೆಗೆ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆ ಜಯಗಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ, ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ಶೂನ್ಯವಾಗಿದ್ದು ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತಂದಲ್ಲಿ ಮಾತ್ರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ, ಈ ಹಿಂದೆ ಅಧಿಕಾರ ನಡೆಸಿದವರು ಕೇವಲ ಅಧಿಕಾರಕ್ಕಾಗಿ ಆಸೆಪಟ್ಟು ಸೌಕರ್ಯಗಳ ಕೊರತೆ ನೀಗಿಸುವಲ್ಲಿ ವಿಫಲವಾಗಿರುವುದರಿಂದ ಪ್ರಸ್ತುತ ಶಾಸಕನಾಗಿರುವ ನಾನು ಪ್ರತಿ ಗ್ರಾಮಕ್ಕೆ ಭೇಟಿ ನೀಡಿದಾಗ ಸಮಸ್ಯೆಗಳು ತಲೆದೋರುತ್ತಿವೆ, ಶಾಸಕನಾಗಿ ಆಯ್ಕೆಯಾದ ನಂತರ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕಾರ ನೀಡಿದ್ದೇನೆ, ರಾಜ್ಯದಲ್ಲಿ ಬೇರೆ ಸರ್ಕಾರ ಅಧಿಕಾರದಲ್ಲಿದ್ದರು ಸಂಬಂಧಪಟ್ಟ ಸಚಿವರ ಮನೆ ಬಾಗಿಲಿಗೆ ಅಲೆದು ತಾಲೂಕಿಗೆ ಅನುದಾನ ತಂದಿದ್ದೇನೆ ಎಂದರು, ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ, ಈಗಿರುವ ಬಿಜೆಪಿ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ಅಧಿಕಾರದಿಂದ ಬೇಸತ್ತಿರುವ ಜನರು ಮತ್ತೆ ಕುಮಾರಣ್ಣನ ಸರಕಾರವನ್ನು ಬಯಸುತ್ತಿದ್ದಾರೆ, ಹಾಗಾಗಿ ರಾಜ್ಯದ ಜನತೆ ನಿರ್ಧಾರದಂತೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು. ಇದೇ ವೇಳೆ ದೊಡ್ಡಕಮರವಳ್ಳಿ, ಆವರ್ತಿ ಹಾಗೂ ಬೆಣಗಾಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲಾಯಿತು.ಈ ಸಂದರ್ಭ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕೊಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ರೇಣುಕಾಸ್ವಾಮಿ, ತಾ.ಪಂ ಮಾಜಿ ಸದಸ್ಯರಾದ ಈರಯ್ಯ, ರಂಗಸ್ವಾಮಿ, ಜಯಂತಿ ಸೋಮಶೇಖರ್, ಪಂಚಾಯಿತಿ ವ್ಯಾಪ್ತಿಯ ಸದಸ್ಯರುಗಳು ಪಕ್ಷದ ಕಾರ್ಯಕರ್ತರು ಮುಖಂಡರು ಹಾಜರಿದ್ದರು.