ವಿವಿಧ ವಸತಿ ಯೋಜನೆಯ ಅನುದಾನದ ಬಿಡುಗಡೆ ಕುರಿತು ಶಾಸಕ ಕೆ.ಮಹದೇವ್ ರವರಿಂದ ಸುದ್ದಿಗೋಷ್ಠಿ 25/01/2022

ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ಈವರೆಗೆ ವಿವಿಧ ವಸತಿ ಯೋಜನೆಯಡಿ ಒಟ್ಟು 15.46 ಕೋಟಿ ರೂ ಅನುದಾನವನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು. 

2010 – 11 ನೇ ಸಾಲಿನಿಂದ 2020 -21 ನೇ ಸಾಲಿನವರೆಗೆ ಬಸವ ವಸತಿ, ಅಂಬೇಡ್ಕರ್ ನಿವಾಸ್, ದೇವರಾಜ ಅರಸು ವಿಶೇಷ ವಸತಿ ಮತ್ತು ಪಿಎಂಎವೈ ಯೋಜನೆಯಡಿ ಭೌತಿಕ ಪ್ರಗತಿಗಾಗಿ ವಿವಿಧ ಕಾರಣಗಳಿಂದ ಅನುದಾನ ಬಿಡುಗಡೆಯಾಗದೆ ಉಳಿದಿದ್ದ ತಾಲ್ಲೂಕಿನ ಸುಮಾರು 2400 ಮನೆಗಳಿಗೆ 7 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ,     ದೇವರಾಜ ಅರಸು ವಸತಿ ಯೋಜನೆಯಡಿ ವಿಧವೆಯರು ಮತ್ತು ವಿಶೇಷ ವರ್ಗದವರಿಗೆ ವಸತಿ ಸಚಿವರ ಸಹಕಾರದೊಂದಿಗೆ 1611 ಮನೆಗಳನ್ನು ಮಂಜೂರಾತಿ ಪಡೆದು ವಸತಿ ಸಚಿವರಾದ ವಿ.ಸೋಮಣ್ಣ ಅವರಿಂದಲೆ 1361 ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪ್ರತಿ ಹಸ್ತಾಂತರಿಸಿದ್ದು ಬಾಕಿ ಇರುವ 250 ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪ್ರತಿಯನ್ನು ಶೀಘ್ರದಲ್ಲೇ ವಿತರಿಸಲು ದಿನಾಂಕ ನಿಗದಿಪಡಿಸಲಾಗುವುದು ಎಂದು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕರು ಮಾಹಿತಿ ನೀಡಿದರು.

2020-21 ನೇ ಸಾಲಿನಲ್ಲಿ ವಸತಿ ಸಚಿವರ ನಿರ್ದೇಶನದಂತೆ ಪ್ರತಿ ಗ್ರಾ.ಪಂ ಗೆ ಪಿಎಂಎವೈ ಯೋಜನೆಯಡಿ 20 ಮನೆ ಆಯ್ಕೆ ಮಾಡಲಾಗಿತ್ತು ಕಾರಣಾಂತರದಿಂದ ಸರ್ಕಾರ ಅನುಮೋದನೆ ನೀಡಿರಲಿಲ್ಲ ಈ ವಿಷಯವನ್ನು ವಸತಿ ಸಚಿವರ ಗಮನಕ್ಕೆ ತಂದಿದ್ದು ಈ ವರ್ಷ ಅನುಮೋದನೆ ನೀಡುವುದಾಗಿ ತಿಳಿಸಿರುತ್ತಾರೆ, 2016-17 ಮತ್ತು 2019-20 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 369 ಮನೆ ಮಂಜೂರಾಗಿದ್ದು ಈ ಪೈಕಿ 81 ಫಲಾನುಭವಿಗಳು ಈವರೆಗೂ ಮನೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸದಿರುವುದು ಗಮನಕ್ಕೆ ಬಂದಿದ್ದು ಇವರಿಗೆ ವಸತಿ ಸಚಿವರಿಂದ ಮತ್ತೆ 1 ತಿಂಗಳ ಕಾಲಾವಕಾಶವನ್ನು ಪಡೆಯಲಾಗಿದೆ, ಅಷ್ಟರೊಳಗೆ ತಳಪಾಯ ನಿರ್ಮಿಸಿ ಜಿಪಿಎಸ್ ಗೆ ಅಳವಡಿಸದೇ ಇದ್ದಲ್ಲಿ ಸದರಿ ಮನೆಗಳು ಶಾಶ್ವತವಾಗಿ ರದ್ದುಗೊಳ್ಳಲಿದೆ, 2019 – 20 ಮತ್ತು 2020 – 21 ನೇ ಸಾಲಿನ ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದ ಯೋಜನೆಯಡಿ ಎ, ಬಿ ಮತ್ತು ಸಿ  ವರ್ಗದಡಿಯಲ್ಲಿ ಒಟ್ಟು 641 ಮನೆಗಳು ಮಂಜೂರಾಗಿದ್ದು ಈ ಪೈಕಿ 185 ಮನೆಗಳಿಗೆ ಅನುದಾನ ಬಿಡುಗಡೆಗೆ ವಿಳಂಬವಾಗಿತ್ತು ಕಳೆದ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆದು ಅಷ್ಟೂ ಮನೆಗಳ ಪ್ರಗತಿಗೆ ಸುಮಾರು 2.5 ಕೋಟಿ ರೂ ಹಣ ಬಿಡುಗಡೆ ಮಾಡಿಸಲಾಗಿದೆ, 2021-22 ನೇ ಸಾಲಿನಲ್ಲಿ ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮ ಯೋಜನೆಯಡಿ ಒಟ್ಟು 451 ಮನೆಗಳು ಮಂಜೂರಾಗಿದ್ದು ಮನೆ ನಿರ್ಮಾಣ ಕಾರ್ಯ ಪ್ರಾರಂಭಿಸಲು ಮತ್ತು ದುರಸ್ತಿ ಮಾಡಿಕೊಳ್ಳಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 4.21 ಕೋಟಿ ರೂ ಅನುದಾನವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ, ತಾಲ್ಲೂಕಿನ ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿನ ಸುಮಾರು 37 ಎಕರೆ ಗ್ರಾಮಠಾಣಾ ಜಾಗ ಗುರುತಿಸಲಾಗಿದ್ದು ನಿವೇಶನ ರಹಿತರು ಮತ್ತು ವಸತಿ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನಗಳನ್ನು ವಿತರಣೆ ಮಾಡಲು ಕೂಡಲೇ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಮತ್ತು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಭಾರತ ಸ್ವಾತಂತ್ರ್ಯ ಸಂಭ್ರಮಕ್ಕೆ 75 ವರ್ಷಗಳು ಪೂರ್ಣಗೊಂಡ ಸವಿನೆನಪಿಗಾಗಿ ರಾಜ್ಯ ಸರ್ಕಾರವು ಅಮೃತ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಸದರಿ ಯೋಜನೆಯಡಿ ತಾಲ್ಲೂಕಿನ ಬೆಟ್ಟದತುಂಗ, ಹುಣಸವಾಡಿ, ಕೊಪ್ಪ ಮತ್ತು ನವಿಲೂರು ಗ್ರಾ.ಪಂ ಆಯ್ಕೆ ಮಾಡಲಾಗಿದ್ದು ಸದರಿ ಗ್ರಾ.ಪಂ ಗಳ ನಿವೇಶನ ರಹಿತರಿಗೆ ನಿವೇಶನವನ್ನು ಮತ್ತು ವಸತಿ ರಹಿತರಿಗೆ ವಸತಿ ಸೌಕರ್ಯವನ್ನು ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿ ಒಟ್ಟಾರೆ ತಾಲ್ಲೂಕಿನಾದ್ಯಂತ ವಿವಿಧ ಯೋಜನೆಯಡಿ ವಸತಿ ರಹಿತರಿಗೆ ನಿವೇಶನ ಕಲ್ಪಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಮಾಹಿತಿ ನೀಡಿದರು.

Leave a Comment

Your email address will not be published. Required fields are marked *

error: Content is protected !!
Scroll to Top